ADVERTISEMENT

ಬಿಬಿಎಂಪಿ ಬಜೆಟ್: ವಿತ್ತೀಯ ಶಿಸ್ತು ಮತ್ತೆ ಮರೀಚಿಕೆ

ಬೆಂಗಳೂರು ಮಹಾನಗರ ಪಾಲಿಕೆ: ಹುಸಿಯಾ‌ದ ವಾಸ್ತವ ಬಜೆಟ್‌ ವಾಗ್ದಾನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 19:48 IST
Last Updated 21 ಏಪ್ರಿಲ್ 2020, 19:48 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿಯಲ್ಲೂ ವಾಸ್ತವ ಬಜೆಟ್‌ ಮಂಡಿಸಬೇಕು. ಬಜೆಟ್‌ಗೂ ವಿತ್ತೀಯ ಹೊಣೆಗಾರಿಕೆಯ ನಿಯಮಗಳನ್ನು ಅನ್ವಯ ಮಾಡಬೇಕು ಎಂಬ ಬೇಡಿಕೆಗೆ ಈ ಬಾರಿಯೂ ಮನ್ನಣೆ ಸಿಕ್ಕಿಲ್ಲ. ಈ ಬಾರಿ ವಾಸ್ತವ ಬಜೆಟ್‌ ಮಂಡಿಸುತ್ತೇವೆ ಎಂಬ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ್ ಅವರ ಭರವಸೆ ಹುಸಿಯಾಗಿದೆ.

ಬಜೆಟ್‌ ಗಾತ್ರವನ್ನು ₹ 9ಸಾವಿರ ಕೋಟಿ ಒಳಗೆ ಕಾಯ್ದುಕೊಳ್ಳುವಂತೆ ಆರ್ಥಿಕ ವಿಭಾಗದ ಅಧಿಕಾರಿಗಳು ಸಲಹೆ ನೀಡಿದ್ದರು. ಆದರೆ, ಅದಕ್ಕೆ ಬೆಲೆ ನೀಡದೇ ₹ 10,899 ಕೋಟಿ ಬಜೆಟ್‌ ಮಂಡಿಸಲಾಗಿದೆ.

2019–20ರಲ್ಲೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಎಸ್‌.ಪಿ.ಹೇಮಲತಾ ವಾಸ್ತವಕ್ಕೆ ಮೀರಿ ₹ 10,691 ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಬಜೆಟ್‌ ಮೇಲಿನ ಚರ್ಚೆಯಲ್ಲಿ ತಗಾದೆ ತೆಗೆದಿದ್ದ ಸದಸ್ಯರನ್ನು ತೃಪ್ತಿಪಡಿಸಲು ಬಜೆಟ್‌ ಗಾತ್ರವನ್ನು ₹ 12,958 ಕೋಟಿಗೆ ಹೆಚ್ಚಿಸಿದ್ದರು.

ADVERTISEMENT

ಆಗಿನ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಬಜೆಟ್‌ನ ಉತ್ಪ್ರೇಕ್ಷಿತ ವರಮಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಇಲಾಖೆಯು ಬಜೆಟ್‌ ಗಾತ್ರವನ್ನು ಕಡಿತಗೊಳಿಸಿ ಅನುಮೋದನೆ ನೀಡಿತ್ತು. ತೆರಿಗೆ ಸಂಗ್ರಹ ಗುರಿ ಸಾಧನೆ ಆಗದ ಕಾರಣ ಕಳೆದ ಸಾಲಿನ ಬಜೆಟ್‌ನ ಅನೇಕ ಕಾರ್ಯಕ್ರಮಗಳು ಕೊನೆಗೂ ಅನುಷ್ಠಾನಗೊಳ್ಳಲೇ ಇಲ್ಲ. ಕಳೆದ ಸಾಲಿನ ಅನುಭವದಿಂದ ಪಾಲಿಕೆ ಪಾಠ ಕಲಿತಂತೆ ಇಲ್ಲ.

ತೆರಿಗೆ: ಗುರಿ ವಾಸ್ತವಕ್ಕೆ ದೂರ

2019–20ನೇ ಸಾಲಿನಲ್ಲೂ ₹ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಎಲ್ಲ ರೀತಿಯ ಪ್ರಯತ್ನಗಳ ಬಳಿಕವೂ 2020ರ ಮಾರ್ಚ್‌ ಅಂತ್ಯದವರೆಗೆ ಸಂಗ್ರಹವಾಗಿದ್ದು ₹ 2,689.65 ಕೋಟಿ ತೆರಿಗೆ ಮಾತ್ರ. ಈ ಬಾರಿ ಮತ್ತೆ ₹ 3,500 ಕೋಟಿ ಗುರಿ ನಿಗದಿಪಡಿಸಲಾಗಿದೆ.

ಬಿಬಿಎಂಪಿಯು ಬಹುಮಹಡಿ ಕಟ್ಟಡಗಳು, ಮಾಲ್‌ಗಳು, ಟೆಕ್‌ ಪಾರ್ಕ್‌ ಮತ್ತಿತರ ವಾಣಿಜ್ಯ ಸಂಕೀರ್ಣಗಳ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಿದೆ. ವಾಸ್ತವಕ್ಕಿಂತ ಕಡಿಮೆ ತೆರಿಗೆ ಘೋಷಿಸಿಕೊಂಡವರಿಂದ ದಂಡನಾ ಶುಲ್ಕದಿಂದ ₹ 400 ಕೋಟಿ ವರಮಾನ ಬರುತ್ತದೆ ಎಂದು ಕಳೆದ ವರ್ಷದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಸಂಗ್ರಹವಾಗಿದ್ದು ₹ 46.96 ಕೋಟಿ ಮಾತ್ರ. ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ಇದೇ ವಿಚಾರವನ್ನು ಪ್ರಸ್ತಾಪಿಸಲಾಗಿದೆ.

ಒಎಫ್‌ಸಿ ಶುಲ್ಕದ ರೂಪದಲ್ಲಿ 2019–20ನೇಸಾಲಿನಲ್ಲಿ ₹ 175 ಕೋಟಿ ವರಮಾನ ನಿರೀಕ್ಷೆ ಮಾಡಲಾಗಿತ್ತು. ಬಂದಿದ್ದು ₹ 41 ಕೋಟಿ. ನಗರ ಯೋಜನೆ ವಿಭಾಗದಿಂದ ₹ 841.20 ಕೋಟಿ ವರಮಾನ ನಿರೀಕ್ಷಿಸಲಾಗಿತ್ತು. 2020ರ ಫೆಬ್ರುವರಿವರೆಗೆ ಸಂಗ್ರಹವಾಗಿದ್ದು ₹ 390 ಕೋಟಿ. ಲಾಕ್‌ಡೌನ್ ಪರಿಣಾಮಗಳನ್ನು ಮುಂದಾಲೋಚಿಸದೆ 2020–21ನೇ ಸಾಲಿನಲ್ಲಿ ಈ ವಿಭಾಗದಿಂದ ₹ 613.52 ಕೋಟಿ ವರಮಾನ ನಿರೀಕ್ಷೆ ಮಾಡಲಾಗಿದೆ.

ಎಸಿಎಸ್‌ ಸೂಚನೆಗೆ ಕಿಮ್ಮತ್ತಿಲ್ಲ

ಬಿಬಿಎಂಪಿಯು ವಾಸ್ತವದ ಆದಾಯಕ್ಕೆ ತಕ್ಕಂತೆ 2020–21ನೇ ಸಾಲಿನ ಬಜೆಟ್‌ ರೂಪಿಸಬೇಕು. ವಾಸ್ತವದ ಸ್ವೀಕೃತಿಗೆ ಅನುಗುಣವಾಗಿ ವೆಚ್ಚವನ್ನು ನಿಗದಿಮಾಡಬೇಕು ಎಂದು ಸೂಚಿಸಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ರಾಕೇಶ್‌ ಸಿಂಗ್‌ ಅವರು ಫೆ.27ರಂದೇ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದರು.

‘ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ವರಮಾನ ಬರದಿದ್ದರೂ ವೆಚ್ಚಗಳಿಗೆ ಒದಗಿಸಿರುವಷ್ಟು ಅನುದಾನಕ್ಕೆ ಜಾಬ್‌ಕೋಡ್‌ ನೀಡಲಾಗುತ್ತಿದೆ. ಗುತ್ತಿಗೆದಾರರಿಗೆ ಪಾವತಿ ಬಾಕಿ ಉಳಿಸಿಕೊಂಡ ಬಿಲ್‌ಗಳ ಮೊತ್ತ ಪ್ರತಿವರ್ಷ ಜಾಸ್ತಿಯಾಗುತ್ತಲೇ ಇದೆ. ಇದರಿಂದ ಪಾಲಿಕೆಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ’ ಎಂದು ಎಚ್ಚರಿಸಿದ್ದರು. ಆದರೂ ಬಜೆಟ್‌ ರೂಪಿಸುವಾಗ ಎಸಿಎಸ್‌ ಅವರ ಸೂಚನೆಯನ್ನು ಕಡೆಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.