ADVERTISEMENT

ಮಾಸ್ಕ್‌ ಧರಿಸದೆ ಪದೇ ಪದೇ ಸಿಕ್ಕಿಬಿದ್ದರೆ ಕ್ರಿಮಿನಲ್‌ ಕೇಸ್‌: ಬಿಬಿಎಂಪಿ ಆಯುಕ್ತ

ಬಿಬಿಎಂಪಿ ಆಯುಕ್ತ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 19:31 IST
Last Updated 1 ಅಕ್ಟೋಬರ್ 2020, 19:31 IST
ಎನ್.ಮಂಜುನಾಥ ಪ್ರಸಾದ್‌
ಎನ್.ಮಂಜುನಾಥ ಪ್ರಸಾದ್‌   

ಬೆಂಗಳೂರು: ‘ನಗರದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಎಲ್ಲರೂ ಮುಖಗವಸು ಧರಿಸುವುದು ಕಡ್ಡಾಯ. ಮಾಸ್ಕ್‌ ಧರಿಸದವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಪದೇ ಪದೇ ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರಿಗೆ ಮಾರ್ಷಲ್‌ಗಳು ₹ 200 ದಂಡ ವಿಧಿಸುತ್ತಿದ್ದಾರೆ. ಆದರೂ ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ದಂಡ ಕಟ್ಟಿದ ಬಳಿಕವೂ ಪದೇ ಪದೇ ಅದೇ ತಪ್ಪನ್ನು ಎಸಗುತ್ತಿದ್ದಾರೆ. ಹಾಗಾಗಿ ದಂಡದ ಮೊತ್ತವನ್ನು ₹200ರಿಂದ ₹ 1 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಈ ನಿಯಮವನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ಈ ಕುರಿತು ಶೀಘ್ರವೇ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ’ ಎಂದರು.

‘ಕೋವಿಡ್‌ಗೆ ಇದುವರೆಗೂ ಯಾವುದೇ ಔಷಧಿ ಅಥವಾ ಲಸಿಕೆ ತಯಾರಾಗಿಲ್ಲ. ಈ ಸೋಂಕು ತಡೆಯಲು ಸದ್ಯಕ್ಕೆ ನಮ್ಮಲ್ಲಿರುವ ಅಸ್ತ್ರವೆಂದರೆ ಮಾಸ್ಕ್‌. ಈ ರೋಗವನ್ನು ನಿಯಂತ್ರಿಸಬೇಕಾದರೆ ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವುದನ್ನು ನಿಯಂತ್ರಿಸುವುದು, ಜನರ ಜೊತೆಅಂತರ ಕಾಯ್ದುಕೊಳ್ಳವುದು ಅನಿವಾರ್ಯ’ ಎಂದರು.

ADVERTISEMENT

ಮತ್ತೆ 120 ಮಾರ್ಷಲ್‌ಗಳ ನೇಮಕ

‘ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಅಡ್ಡಾಡುವವರನ್ನು ಪತ್ತೆಹಚ್ಚಿ ದಂಡ ವಿಧಿಸಲು 230 ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಇನ್ನೂ 120 ಮಂದಿ ಮಾರ್ಷಲ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಮಾರ್ಷಲ್‌ಗಳ ಜೊತೆ ಪೊಲೀಸ್ ಸಿಬ್ಬಂದಿಯೂ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಸ್ಕ್ ಧರಿಸದ ವ್ಯಕ್ತಿಗೆ ದಂಡ ವಿಧಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಸಾಧನಗಳನ್ನು ಮಾರ್ಷಲ್‌ಗಳಿಗೆ ನೀಡಲಾಗಿದೆ. ತಪ್ಪೆಸಗುವವರ ಭಾವಚಿತ್ರವನ್ನೂ ಈ ಸಾಧನಲ್ಲಿ ತೆಗೆಯಬಹುದು. ಅವರು ಇರುವ ಸ್ಥಳವನ್ನೂ ನಮೂದಿಸಬಹುದು. ದಂಡ ವಿಧಿಸುವ ರಸೀದಿಯನ್ನೂ ಸ್ಥಳದಲ್ಲೇ ನೀಡಬಹುದು’ ಎಂದು ಬಿಬಿಎಂಪಿ ಆಯುಕ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.