ADVERTISEMENT

ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಸದ್ಯಕ್ಕಿಲ್ಲ: ಸಚಿವ ನಾಗೇಶ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:18 IST
Last Updated 18 ಮಾರ್ಚ್ 2022, 21:18 IST
ಬಿ.ಸಿ. ನಾಗೇಶ್‌
ಬಿ.ಸಿ. ನಾಗೇಶ್‌   

ಬೆಂಗಳೂರು: ‘ಪಠ್ಯಪುಸ್ತಕದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2022–23) ಭಗವದ್ಗೀತೆ ಸೇರಿಸುವ ಪ್ರಸ್ತಾವ ಇಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸೇರಿಸುವ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

‘ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಧ್ಯಯನ ಅಳವಡಿಸಲಾಗುತ್ತದೆಯೇ ಎಂದು ಪತ್ರಕರ್ತರೇ ಕೆದಕಿ ನನ್ನನ್ನು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ನಾನೇ ಸ್ವತಃ ಏನನ್ನೂ ಪ್ರಸ್ತಾಪ ಮಾಡಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು. ‘ನೀವೇ (ಮಾಧ್ಯಮದವರು) ಇದನ್ನು ಪ್ರಸ್ತಾಪ ಮಾಡಿರುವುದರಿಂದ ಈ ಬಗ್ಗೆ ಶಿಕ್ಷಣ ತಜ್ಞರ ಸಲಹೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ನೀತಿ ಶಿಕ್ಷಣ ರೂಪದಲ್ಲಿ ಕಲಿಕೆಗೆ ಆದ್ಯತೆ ನೀಡಲಾಗುವುದು’ ಎಂದರು.

‘ಭಗವದ್ಗೀತೆ ಎಲ್ಲ ಧರ್ಮಗಳಿಗೂ ಸೇರಿದ್ದು. ಪ್ರಪಂಚದ ಎಲ್ಲ ದೇಶಗಳಲ್ಲಿ ಭಗವದ್ಗೀತೆಯನ್ನು ಅಭ್ಯಾಸ ಮಾಡುವ ಕ್ರಮ ಬಂದಿದೆ. ಇದು ಯಾವುದೇ ಧರ್ಮ, ಜಾತಿಗೆ ಸಂಬಂಧಿಸಿದ್ದಲ್ಲ. ಶತಮಾನಗಳಿಂದ ಭಗವದ್ಗೀತೆ ಅಧ್ಯಯನ ಮಾಡುವ, ಓದುವ ಪದ್ಧತಿ ನಮ್ಮಲ್ಲಿದೆ’ ಎಂದರು.

ADVERTISEMENT

‘ಈಗ ಪುಸ್ತಕದಲ್ಲಿ ಜ್ಞಾನವಿದೆ, ಸಂಸ್ಕಾರವಿಲ್ಲ ಎನ್ನುತ್ತಿದ್ದಾರೆ. ನೈತಿಕ ಶಿಕ್ಷಣ ತರುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಶಿಕ್ಷಣ ತಜ್ಞರ ಸಲಹೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ನೀತಿ ವಿಜ್ಞಾನದ ಕಲಿಕೆಗೆ ಆದ್ಯತೆ ನೀಡಲಾಗುವುದು. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಜೊತೆ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ಎಂದರು.

ಹಿಜಾಬ್‌ಗೆ ಅವಕಾಶ ಇಲ್ಲ: ‘ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಇಲಾಖೆ ಮತ್ತೆ ಸ್ಪಷ್ಟನೆ ನೀಡಿದೆ. ಈ ವಿಷಯದಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದು, ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಲು ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

‘ದ್ವಿತೀಯ ಪಿಯುಸಿ ಪರೀಕ್ಷೆಗೆ ತಿಂಗಳು ಮಾತ್ರ ಬಾಕಿ ಇದೆ. ಈ ಮಧ್ಯೆಯೇ ಸುಪ್ರೀಂಕೋರ್ಟ್ ಮೊರೆ ಹೋದರೆ, ಅಲ್ಲಿಯ ತೀರ್ಪು ಬರುವವರೆಗೂ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಕೇಳಿದ್ದರು. ಆದರೆ, ಅದಕ್ಕೆ ಅವಕಾಶ ಇಲ್ಲ’ ಎಂದೂ ಅವರು
ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.