ADVERTISEMENT

ಪರಿಶಿಷ್ಟ ಜಾತಿಯವರೇ ಹೆಚ್ಚು ಇದ್ದರೂ ಸಿಕ್ಕಿಲ್ಲ ಮೀಸಲಾತಿ

ಯಲಹಂಕ, ಬ್ಯಾಟರಾಯನಪುರ ಕ್ಷೇತ್ರಗಳ ದಲಿತ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:30 IST
Last Updated 21 ಸೆಪ್ಟೆಂಬರ್ 2020, 2:30 IST

ಬೆಂಗಳೂರು: ಯಲಹಂಕ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದರೂ ಬಿಬಿಎಂಪಿ ಮೀಸಲಾತಿ ಕರಡು ಪಟ್ಟಿಯಲ್ಲಿ ಇಲ್ಲಿನ ಒಂದು ವಾರ್ಡನ್ನೂ ಈ ಜಾತಿಯವರಿಗೆ ಮೀಸಲಿಟ್ಟಿಲ್ಲ. ಸರ್ಕಾರದ ಈ ನಡೆಗೆ ಪರಿಶಿಷ್ಟ ಜಾತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಚರ್ಚಿಸಲು ಯಲಹಂಕದಲ್ಲಿ ಇತ್ತೀಚೆಗೆ ಪಕ್ಷಭೇದ ಮರೆತು ಸಭೆ ನಡೆಸಿರುವ ಪರಿಶಿಷ್ಟ ಜಾತಿ ಮುಖಂಡರು, ಮೀಸಲಾತಿ ಮರುನಿಗದಿಗೆ ಒತ್ತಾಯಿಸಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಪುನರ್‌ ವಿಂಗಡಣೆಗೆ ಮುನ್ನ ಯಲಹಂಕ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿತ್ತು. ಇದರ ವ್ಯಾಪ್ತಿಯ ಯಲಹಂಕ ಹಾಗೂ ಬ್ಯಾಟರಾಯನಪುರ ಕ್ಷೇತ್ರಗಳ ವಾರ್ಡ್‌ಗಳಲ್ಲಿ ಈಗಲೂ ಪರಿಶಿಷ್ಟ ಜಾತಿಯವರ ಸಂಖ್ಯೆ ಹೆಚ್ಚು ಇದೆ. 2015 ರ ಬಿಬಿಎಂಪಿ ಚುನಾವಣೆಯಲ್ಲಿ ಯಲಹಂಕ ಕ್ಷೇತ್ರದ ನಾಲ್ಕು ವಾರ್ಡ್‌ಗಳಲ್ಲಿ ಒಂದನ್ನೂ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿರಲಿಲ್ಲ. ಈ ಬಾರಿಯೂ ಮೀಸಲಿಟ್ಟಿಲ್ಲ. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಥಣಿಸಂದ್ರ ಮತ್ತು ಕುವೆಂಪುನಗರ ವಾರ್ಡ್‌ಗಳನ್ನು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿತ್ತು. ವಾರ್ಡ್ ಮರುವಿಂಗಡನೆ ಬಳಿಕ ಈ ಕ್ಷೇತ್ರದ ವಾರ್ಡ್‌ಗಳ ಸಂಖ್ಯೆ 9ಕ್ಕೆ ಹೆಚ್ಚಳವಾಗಿದ್ದು, ಅದರಲ್ಲಿ ಒಂದು ವಾರ್ಡ್‌ನಲ್ಲೂ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಕಲ್ಪಿಸಿಲ್ಲ.

ADVERTISEMENT

‘ಅಧಿಕಾರದಲ್ಲಿರುವ ರಾಜಕೀಯ ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮನಬಂದಂತೆ ಮೀಸಲಾತಿಯನ್ನು ನಿಗದಿಪಡಿಸುತ್ತಿದ್ದಾರೆ. ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ. ಪರಿಶಿಷ್ಟರನ್ನು ಅಧಿಕಾರದಿಂದ ದೂರವಿಡುವ ಹುನ್ನಾರವಿದು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ನಾಗರಾಜ್‌ ಕೊಡಿಗೆಹಳ್ಳಿ ಆರೋಪಿಸಿದರು.

‘ಮೀಸಲಾತಿ ಪಟ್ಟಿ ಪ್ರಕಟವಾದ ಬಳಿಕವಾದರೂ ಈ ಕ್ಷೇತ್ರಗಳ ಶಾಸಕರು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿಲ್ಲ. ಈ ತಪ್ಪನ್ನು ಸರಿಪಡಿಸದಿದ್ದರೆ ನಾವು ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ’ ಎಂದು ಎಚ್ಚರಿಸಿದರು.

‘ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿರುವ ವಾರ್ಡ್‌ನಲ್ಲಿ ಈ ಜಾತಿಯ ಅಭ್ಯರ್ಥಿಗಳಿಗೆ ಆದ್ಯತೆ ಸಿಗಬೇಕು. ಈ ಅನ್ಯಾಯದ ವಿರುದ್ಧ ನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆ. ಪಟ್ಟಿಯನ್ನು ಪರಿಷ್ಕರಿಸಿ ನಮಗೆ ಆಗಿರುವ ಅನ್ಯಾಯ ಸರಿಪಡಿಸದೇ ಇದ್ದರೆ, ಹೋರಾಟ ಅನಿವಾರ್ಯ’ ಎಂದು ಮಾದಿಗ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಕೋಗಿಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.