ADVERTISEMENT

ಬಿಬಿಎಂಪಿ ಸೂಚಿಸಿದ್ದ ಕಟ್ಟಡಗಳಲ್ಲಿಲ್ಲ ವಸತಿ ವ್ಯವಸ್ಥೆ

ಇನ್ನೂ ತೆರೆದಿಲ್ಲ 203 ಕಟ್ಟಡಗಳ ಬೀಗ | ಎರಡು ಕಲ್ಯಾಣ ಮಂಟಪಗಳಲ್ಲಿ ಮಾತ್ರ ಕಾರ್ಮಿಕರಿಗೆ ಆಶ್ರಯ

ಸಂತೋಷ ಜಿಗಳಿಕೊಪ್ಪ
Published 19 ಏಪ್ರಿಲ್ 2020, 21:55 IST
Last Updated 19 ಏಪ್ರಿಲ್ 2020, 21:55 IST
   

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ಮೇ 3ರವರೆಗೆ ಲಾಕ್‌ಡೌನ್‌ ಮುಂದುವರಿಸಲಾಗಿದ್ದು, ದುಡಿಯುವ ವರ್ಗವಾದ ಕಾರ್ಮಿಕರು ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ. ಕೆಲಸವಿಲ್ಲದೇ ಒಂದು ಹೊತ್ತಿನ ಅನ್ನಕ್ಕೂ ಕಷ್ಟಪಡುತ್ತಿದ್ದಾರೆ. ಇಂಥ ನೊಂದ ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಮಾಡಲು ಬಿಬಿಎಂಪಿ 203 ಕಟ್ಟಡಗಳನ್ನು ವಶಕ್ಕೆ ಪಡೆದಿದ್ದು, ಈ ಕಟ್ಟಡಗಳಲ್ಲಿ ಇದುವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ.

‘ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರ ಕಲ್ಪಿಸಲು 203 ಕಟ್ಟಡ ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಕಾರ್ಮಿಕ ಇಲಾಖೆ ಸುಪರ್ದಿಗೆ ನೀಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಇತ್ತೀಚೆಗಷ್ಟೇ ಕಟ್ಟಡಗಳ ಹೆಸರು ಹಾಗೂ ವಿಳಾಸ ಸಮೇತ ಆದೇಶ ಹೊರಡಿಸಿದ್ದರು.

ಆದೇಶ ಪಾಲನೆಯಾಗುತ್ತಿದೆಯಾ? ಎಂಬುದನ್ನು ತಿಳಿದುಕೊಳ್ಳಲು ಕಟ್ಟಡಗಳಿಗೆ ಹೋದಾಗ ಆಶ್ಚರ್ಯವಾಯಿತು. ಎಲ್ಲ ಕಟ್ಟಡಗಳು ಇಂದಿಗೂ ಬೀಗ ಹಾಕಿದ್ದ ಸ್ಥಿತಿಯಲ್ಲೇ ಇವೆ.ಆದೇಶ ಕೇವಲ ಕಾಗದದಲ್ಲೇ ಉಳಿದಿದ್ದು, ಅದು ಜಾರಿಗೆ ಬಾರದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಕಾರ್ಮಿಕರಿಗೆ ಸಕಲ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಹೇಳುತ್ತಿದ್ದು, ಇಲ್ಲಿ ನೋಡಿದರೆ ವಶಕ್ಕೆ ಪಡೆದ ಕಟ್ಟಡಗಳ ಉಪಯೋಗವೇ ಆಗುತ್ತಿಲ್ಲ.

ADVERTISEMENT

ಪಶ್ಚಿಮ ಕಾರ್ಡ್‌ ರಸ್ತೆಯ ಸಪ್ತಪದಿ, ಗೌರಿಶಂಕರ, ರಾಜಹಂಸ, ಪದ್ಮಾವತಿ, ಭೀಮರಾವ್ ಪ್ಯಾಲೇಸ್, ಚೌಡೇಶ್ವರಿ, ನಾಗದೇವಕಿ ಪ್ಯಾಲೇಸ್, ಶುಭಾರಾಮ್, ಸಪ್ತಗಿರಿ, ಓಸ್ವಾಲ್ ಕಮ್ಯೂನಿಟಿ ಸೆಂಟರ್, ಪ್ರೇಮಾನಂದ ಕನ್ವೆನ್ಶನ್ ಹಾಲ್, ಶಿವಪ್ರಭ ಹಾಗೂ ಗಂಗಮ್ಮ ತಿಮ್ಮಯ್ಯ ಕನ್ವೆನ್ಶನ್ ಹಾಲ್ ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಕಟ್ಟಡಗಳ ಕಾವಲಿಗೆ ಮಾಲೀಕರೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ.

ಸಿಬ್ಬಂದಿಯನ್ನು ಮಾತನಾಡಿಸಿದಾಗ, ‘ಮಾ. 22ರಿಂದಲೇ ಕಲ್ಯಾಣ ಮಂಟಪ ಬಂದ್‌ ಮಾಡಲಾಗಿದೆ’ ಎಂದರು. ‘ಯಾರಾದರೂ ಅಧಿಕಾರಿಗಳು ಬಂದಿದ್ದರಾ?’ ಎಂದಿದ್ದಕ್ಕೆ, ’ಇದುವರೆಗೂ ಯಾರು ಬಂದಿಲ್ಲ’ ಎಂದು ಸಿಬ್ಬಂದಿ ಹೇಳಿದರು.

‘ಈ ಕಟ್ಟಡವನ್ನು ವಶಕ್ಕೆ ಪಡೆಯಲಾಗಿದೆ’ ಎಂಬ ಬಿಬಿಎಂಪಿಯ ಯಾವ ಫಲಕವೂ ಕಟ್ಟಡ ಬಳಿ ಇಲ್ಲ.

ಈ ಬಗ್ಗೆ ಬಿಬಿಎಂಪಿ ವಲಯ ಕಚೇರಿ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ, ‘203 ಕಟ್ಟಡಗಳ ಬಗ್ಗೆ ಗೊತ್ತಿಲ್ಲ. ನಮ್ಮ ವಲಯ ಕಚೇರಿಯಿಂದ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದೇವೆ. ಊಟವನ್ನೂ ಕೊಡುತ್ತಿದ್ದೇವೆ’ ಎಂದರು.

ಎರಡು ಕಲ್ಯಾಣ ಮಂಟಪಗಳಲ್ಲಿ ಆಶ್ರಯ: ಬಿಬಿಎಂಪಿ ವಶಕ್ಕೆ ಪಡೆದು ಸುಪರ್ದಿಗೆ ನೀಡಿರುವ ಕಟ್ಟಡಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲವೆಂಬ ಆರೋಪವಿದೆ.

ಆದರೆ, ಕಾರ್ಮಿಕ ಇಲಾಖೆ ತನ್ನದೇ ಅನುದಾನ ಬಳಸಿಕೊಂಡು ನಗರದ ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಸಮೀಪದ ಹರಿಕಲ್ಯಾಣ ಮಂಟಪ ಹಾಗೂ ಪಟ್ಟಣಗೆರೆಯ ವೈಟ್ ಪ್ಯಾಲೇಸ್‌ನಲ್ಲಿ ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಮಾಡಿದೆ. 200ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳು ಇಲ್ಲಿ ಆಶ್ರಯ ಪಡೆದಿವೆ.

ಕಾರ್ಮಿಕ ಇಲಾಖೆ ಹಾಗೂ ಅದರ ಅಂಗವಾದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಕಾರ್ಮಿಕರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

‘ಲಾಕ್‌ಡೌನ್ ಜಾರಿಯಾದಾಗಿನಿಂದಲೂ ಕಾರ್ಮಿಕರಿಗೆ ಆಶ್ರಯ ನೀಡಲಾಗಿದೆ. ಇದೀಗ ಲಾಕ್‌ಡೌನ್‌ ಮುಂದುವರಿದಿದ್ದು, ಹೊಸ ಕಾರ್ಮಿಕರ‍್ಯಾರೂ ಆಶ್ರಯ ಬೇಕೆಂದು ಹೇಳಿಲ್ಲ. ಅವರು ಆಶ್ರಯ ಬಯಸಿದರೆ ನೀಡುತ್ತೇವೆ. ಕಾರ್ಮಿಕರ ಸಂಖ್ಯೆಯೂ ಕಡಿಮೆ ಇದೆ. ಹೀಗಾಗಿ, ಹೊಸ ಕಟ್ಟಡ ಬಳಕೆ ಮಾಡಲೇ ಬೇಕಾದ ಪರಿಸ್ಥಿತಿ ಉಲ್ಪಣಿಸಿಲ್ಲ’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ರಜೆ ದಿನವೂ ಕೆಲಸ: ಮಂಡಳಿ ಸಿಬ್ಬಂದಿಗೆ ಮೆಚ್ಚುಗೆ

ನಗರದ ಹರಿ ಕಲ್ಯಾಣ ಮಂಟಪ ಹಾಗೂ ವೈಟ್‌ ಪ್ಯಾಲೇಸ್‌ನಲ್ಲಿರುವ ಕಾರ್ಮಿಕರಿಗೆ ಉಪಹಾರ ಹಾಗೂ ಊಟ ತಲುಪಿಸುವ ಜವಾಬ್ದಾರಿಯನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವಹಿಸಿಕೊಂಡಿದೆ.

ಮಂಡಳಿಯ ಬಹುತೇಕ ಸಿಬ್ಬಂದಿಲಾಕ್‌ಡೌನ್‌ ಆರಂಭವಾದಾಗಿನಿಂದಲೂ ಸರ್ಕಾರಿ ರಜೆ ದಿನವೂ ಕೆಲಸಕ್ಕೆ ಹಾಜರಾಗುತ್ತಿದ್ದು, ಇದಕ್ಕೆಅಧಿಕಾರಿಗಳು ಹಾಗೂ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಂಡಳಿಯ ಸಿಬ್ಬಂದಿಯೇ ನೋಂದಾಯಿತ ಕಾರ್ಮಿಕರ ವಸತಿ ಸ್ಥಳಗಳಿಗೆ ಭೇಟಿ, ಅವರ ಆರೋಗ್ಯದ ಬಗ್ಗೆ ನಿಗಾ ಹಾಗೂ ಅಹವಾಲು ಆಲಿಸಿ ಹಿರಿಯ ಅಧಿಕಾರಿಗಳಿಗೆ ತಲುಪಿಸಿ ಪರಿಹಾರ ಕಂಡುಕೊಳ್ಳುವ ಕೆಲಸವನ್ನೂ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.