ADVERTISEMENT

ಅರ್ಕಾವತಿ ಬಡಾವಣೆಗೆ ಏಕಿಲ್ಲ ತೆರಿಗೆ ವಿನಾಯಿತಿ? ನಿವೇಶನದಾರರ ಪ್ರಶ್ನೆ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಮಾದರಿ– ಮೂಲಸೌಕರ್ಯ ವಂಚಿತ ನಿವೇಶನದಾರರ ಪ್ರಶ್ನೆ

ಪ್ರವೀಣ ಕುಮಾರ್ ಪಿ.ವಿ.
Published 22 ಜುಲೈ 2021, 20:32 IST
Last Updated 22 ಜುಲೈ 2021, 20:32 IST
ಅರ್ಕಾವತಿ ಬಡಾವಣೆಯ 20ನೇ ಬ್ಲಾಕ್‌ ಬಳಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ ಸುರಿದಿರುವುದು
ಅರ್ಕಾವತಿ ಬಡಾವಣೆಯ 20ನೇ ಬ್ಲಾಕ್‌ ಬಳಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ ಸುರಿದಿರುವುದು   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ಇಲ್ಲಿನ ನಿವೇಶನದಾರ ರಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅರ್ಕಾವತಿ ಬಡಾವಣೆಯ ನಿವೇಶನದಾರರೂ ತೆರಿಗೆ ವಿನಾಯಿತಿಗೆ ಬೇಡಿಕೆ ಇಟ್ಟಿದ್ದಾರೆ.

‘ನಾಡಪ್ರಭು ಕೆಂಪೇಗೌಡ ಬಡಾವಣೆಯ ರೀತಿಯಲ್ಲೇ ನಮ್ಮ ಬಡಾವಣೆಗೂ ಈಗಲೂ ಸರಿಯಾದ ರಸ್ತೆ ಇಲ್ಲ, ಕುಡಿಯುವ ನೀರಿನ ಸೌಕರ್ಯ ಇಲ್ಲ. ಹಾಗಾಗಿ ಇಲ್ಲಿ ನಿವೇಶನ ಹಂಚಿಕೆಯಾಗಿರುವವರೂ ಮನೆ ನಿರ್ಮಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಬಿಡಿಎ ಈ ಬಡಾವಣೆಯನ್ನು ನಿರ್ವಹಣೆಯೇ ಮಾಡದ ಮೇಲೆ ನಮ್ಮಿಂದ ಆಸ್ತಿ ತೆರಿಗೆ ಕಟ್ಟಿಸಿಕೊಳ್ಳುವುದು ಎಷ್ಟು ಸರಿ’ ಎಂಬುದು ಅರ್ಕಾವತಿ ಬಡಾವಣೆಯ ನಿವೇಶನದಾರರ ಪ್ರಶ್ನೆ. ‘ಕೆಂಪೇಗೌಡ ಬಡಾವಣೆಯ ನಿವೇಶನದಾರ
ರಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಿದ ಆಧಾರದಲ್ಲೇ ನಮಗೂ ವಿನಾಯಿತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಅರ್ಕಾವತಿ ಬಡಾವಣೆಗೆ ಮೂಲಸೌಕರ್ಯ ಅಭಿವೃದ್ಧಿಗೆ ₹ 200 ಕೋಟಿ ಬಿಡುಗಡೆ ಮಾಡಿ ಎರಡು ವರ್ಷಗಳು ಕಳೆದಿವೆ. ಆದರೆ, ಮೂಲಸೌಕರ್ಯ ಕಲ್ಪಿಸುವ ಕಾರ್ಯ ಇನ್ನೂ ಪ್ರಗತಿ ಕಂಡಿಲ್ಲ ಎಂಬುದು ಇಲ್ಲಿನ ನಿವೇಶನದಾರರ ದೂರು.

ADVERTISEMENT

‘ಅರ್ಕಾವತಿ ಬಡಾವಣೆಯ ನಾಲ್ಕನೇ ಬ್ಲಾಕ್‌ನಲ್ಲಿ ನನಗೆ ನಿವೇಶನ ಹಂಚಿಕೆಯಾಗಿತ್ತು. ಡಿನೋಟಿಫಿಕೇಷನ್‌ ಕಾರಣಕ್ಕೆ ಆ ನಿವೇಶನವನ್ನು ಹಿಂಪಡೆದ ಬಿಡಿಎ ಥಣಿಸಂದ್ರ ಬಳಿ ಬದಲಿ ನಿವೇಶನವನ್ನು 2016ರಲ್ಲಿ ನೀಡಿದೆ. ಅದರ ನೋಂದಣಿಯೂ ಆಗಿದೆ. ಇದುವರೆಗೂ ನನ್ನ ನಿವೇಶನ ಎಲ್ಲಿದೆ ಎಂಬುದೇ ನನಗೆ ತಿಳಿದಿಲ್ಲ. ಬಡಾವಣೆಯ ಕೆಲವು ಬ್ಲಾಕ್‌ಗಳಲ್ಲಿ ನಿವೇಶನಗಳಿಗೆ ಇನ್ನೂ ಗುರುತಿನ ಸಂಖ್ಯೆ ಹಾಕಿಲ್ಲ. ಗಡಿ ಗುರುತುಗಳನ್ನೂ ಮಾಡಿಲ್ಲ. ಇಲ್ಲಿಗೆ ರಸ್ತೆ ಸಂಪರ್ಕ ಇಲ್ಲ. ಹೆಣ್ಣೂರು ಕ್ರಾಸ್‌ ಕಡೆಯಿಂದ ಮಣ್ಣಿನ ರಸ್ತೆ ಮಾತ್ರ ಇದೆ’ ಎನ್ನುತ್ತಾರೆ ನಿವೇಶನದಾರ ಕೆ.ವಿ.ರಮೇಶ್‌.

‘ಕೆಂಪೇಗೌಡ ಬಡಾವಣೆಯ ನಿವೇಶನದಾರರಿಗೆ ತೆರಿಗೆ ವಿನಾಯಿತಿ ಪಡೆಯಲು ಅರ್ಹರೆಂದಾದರೆ, ಈ ಸೌಲಭ್ಯವನ್ನೂ ನಮಗೂ ವಿಸ್ತರಿಸಬೇಕಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಬಡಾವಣೆಯ 20ನೇ ಬ್ಲಾಕ್‌ನಲ್ಲಿ ನನಗೆ 30X40 ಚದರ ಅಡಿಯ ನಿವೇಶನ ಹಂಚಿಕೆ ಮಾಡಿದ್ದಾರೆ.ಸಾರಾಯಿಪಾಳ್ಯದ ಸಮೀಪದಲ್ಲಿರುವ ಈ ಪ್ರದೇಶದಲ್ಲಿರುವ ಈ ನಿವೇಶನವನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವೇ ಇಲ್ಲ. ಈ ಬ್ಲಾಕ್‌ನ ಕಚ್ಚಾ ರಸ್ತೆ ಮೇಲೆಯೇ ಕಟ್ಟಡ ತ್ಯಾಜ್ಯ ಸುರಿಸಿದ್ದಾರೆ. ಈಗ ಸಂಪರ್ಕವೂ ಸಾಧ್ಯವಾಗದು. ಬಿಡಿಎ ನಮ್ಮಿಂದ ತೆರಿಗೆ ಕಟ್ಟಿಸಿಕೊಳ್ಳುವುದು ನಿವೇಶನಗಳ ನಿರ್ವಹಣೆಗಾಗಿ. ಬಡಾವಣೆಯನ್ನು ಸಮರ್ಪಕವಾಗಿ ನಿರ್ವಹಣೆಯೇ ಮಾಡದ ಮೇಲೆ ನಾವು ತೆರಿಗೆಯನ್ನೇಕೆ ಕಟ್ಟಬೇಕು’ ಎಂಬುದು ನಿವೇಶನದಾರ ವಿ.ನಾರಾಯಣ್‌ ಅವರ ವಾದ.

‘ನನಗೆ 2006ರಲ್ಲೇ ನಿವೇಶನ ಹಂಚಿಕೆ ಆಗಿತ್ತು. ನನ್ನ ಗಮನಕ್ಕೆ ತಾರದೆಯೇ, ಕನಿಷ್ಠ ಒಂದು ನೋಟಿಸ್‌ ಕೂಡಾ ನೀಡದೆಯೇ ಆ ಹಂಚಿಕೆಯನ್ನು ರದ್ದುಪಡಿಸಿ ಬದಲಿ ನಿವೇಶನ ನೀಡಿದರು. 15 ವರ್ಷಗಳಿಂದ ತೆರಿಗೆಯನ್ನು ಚಾಚೂ ತಪ್ಪದೇ ಪಾವತಿಸುತ್ತಿದ್ದೇನೆ. ಇಷ್ಟು ವರ್ಷ ಕಾದ ಬಳಿಕವೂ ನನಗೆ ಸಂಪೂರ್ಣ ಸೌಕರ್ಯವಿರುವ ನಿವೇಶನವನ್ನು ಬಿಡಿಎ ಒದಗಿಸಿಲ್ಲ. ಹಾಗಾಗಿ ನಮ್ಮಿಂದ ತೆರಿಗೆ ವಸೂಲಿ ಮಾಡುವುದನ್ನಾದರೂ ಪ್ರಾಧಿಕಾರವು ನಿಲ್ಲಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ನನಗೆ ಈಗ 75 ವರ್ಷ. ನನ್ನ ಆಯಸ್ಸಿನ ಐದನೇ ಒಂದು ಭಾಗ ಬಿಡಿಎ ನಿವೇಶನ ಪಡೆಯುವ ಓಡಾಟದಲ್ಲೇ ಕಳೆದಿದೆ. ಹೈಕೋರ್ಟ್‌ ಆದೇಶದ ಮೇರೆಗೆ ಬಿಡಿಎ ನನಗೆ ಕೊನೆಯದಾಗಿ 2018ರಲ್ಲಿ ನಿವೇಶನ ಹಂಚಿಕೆ ಮಾಡಿದೆ. ಆದರೆ, ತೆರಿಗೆಯನ್ನು 2006ರಿಂದಲೂ ಕಟ್ಟಿಸಿಕೊಳ್ಳಲಾಗುತ್ತಿದೆ. ನಿವೇಶನವಿರುವ ಜಾಗಕ್ಕೆ ಮೊನ್ನೆ ಹೋಗಿ ನೋಡಿದೆ. ಆ ಪ್ರದೇಶವು ಕುರುಚಲು ಕಾಡಿನಂತಾಗಿದೆ. ನಿವೇಶನಗಳು ಮೂಲಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರಿಗೆ 2021ರ ಜನವರಿಯಲ್ಲೇ ಮನವಿ ಪತ್ರವನ್ನೂ ನೀಡಿದ್ದೇವೆ. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ’ ಎಂದು ನಿವೇಶನದಾರ ಪಿ. ಗೋಪಾಲಯ್ಯ ಬೇಸರ ತೋಡಿಕೊಂಡರು.

ತೆರಿಗೆಯೂ ದುಬಾರಿ

‘ಈ ಆರ್ಥಿಕ ವರ್ಷದಿಂದ ಬಿಡಿಎ ಆಸ್ತಿ ತೆರಿಗೆಯನ್ನೂ ಪರಿಷ್ಕರಿಸಿದೆ. ನಾನು ಕಳೆದ ವರ್ಷಕ್ಕಿಂತ ₹ 1,500 ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಿದೆ. ಈ ಬಡಾವಣೆಯಲ್ಲಿ ನಿವೇಶನ ಹೊಂದಿರುವವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು. ಅವರು ಯಾವ ಸೌಕರ್ಯವೂ ಇಲ್ಲದ ತಮ್ಮ ನಿವೇಶನಕ್ಕೆ ಇಷ್ಟೊಂದು ದುಬಾರಿ ತೆರಿಗೆ ಕಟ್ಟುವುದಾದರೂ ಹೇಗೆ’ ಎಂದು ಕೆ.ವಿ.ರಮೇಶ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.