ADVERTISEMENT

ಬಿಬಿಎಂಪಿ ಸುಪರ್ದಿಗೆ 38 ಕೆರೆ

ಕೆಆರ್‌ಐಡಿಎಲ್‌ಗೆ ಕಾಮಗಾರಿ ಬೇಡ: ನಗರಾಭಿವೃದ್ಧಿ ಇಲಾಖೆ ಷರತ್ತು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 19:37 IST
Last Updated 13 ಡಿಸೆಂಬರ್ 2019, 19:37 IST
ಹೆಬ್ಬಾಳ ಕೆರೆ
ಹೆಬ್ಬಾಳ ಕೆರೆ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶದಲ್ಲಿರುವ 28 ಕೆರೆಗಳು, ಅರಣ್ಯ ಇಲಾಖೆಯ 9 ಕೆರೆಗಳು ಹಾಗೂ ಬಿಎಂಆರ್‌ಸಿಎಲ್‌ನ ಕೆಂಗೇರಿ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಬಿಡಿಎ ವಶಕ್ಕೆ ಈ ಹಿಂದೆ 33 ಜಲಕಾಯಗಳನ್ನು ನೀಡಲಾಗಿತ್ತು. ಈ ಪೈಕಿ, 30 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೆ, ಮೂರು ಜಲಕಾಯಗಳು ನಗರದ ಹೊರಭಾಗದಲ್ಲಿವೆ.

‘ಆರ್ಥಿಕ ಸ್ಥಿತಿ ಸದೃಢವಾಗಿರದ ಕಾರಣ ಹೊಸ ಕಾಮಗಾರಿ ನಡೆಸುವುದು ಹಾಗೂ ಜಲಮೂಲಗಳ ನಿರ್ವಹಣೆ ಮಾಡುವುದು ಕಷ್ಟ. ಹೀಗಾಗಿ, 30 ಕೆರೆಗಳನ್ನು ಪಾಲಿಕೆಗೆ ಹಸ್ತಾಂತರಿಸಬೇಕು’ ಎಂದು ಪ್ರಾಧಿಕಾರವು ನಗರಾಭಿವೃದ್ಧಿ ಇಲಾಖೆಗೆ ಕೋರಿತ್ತು. 38 ಕೆರೆಗಳ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿರುವ ಇಲಾಖೆ, ಕೆಲವು ಷರತ್ತುಗಳನ್ನು ವಿಧಿಸಿದೆ.

ADVERTISEMENT

ಷರತ್ತುಗಳು

ಜಲಮೂಲಗಳ ಮೇಲ್ವಿಚಾರಣೆ, ಅಭಿವೃದ್ಧಿ, ನಿರ್ವಹಣೆ ಹಾಗೂ ಒತ್ತುವರಿ ತೆರವುಗೊಳಿಸುವುದು ಹಾಗೂ ಭವಿಷ್ಯದಲ್ಲಿ ಒತ್ತುವರಿಯಾಗದಂತೆ ತಡೆಗಟ್ಟುವ ಅಂಶಗಳನ್ನು ಒಳಗೊಂಡು ಹಸ್ತಾಂತರ ಮಾಡಬೇಕು. ಜಲಮೂಲದ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಯ ವಿವರ, ವೆಚ್ಚ, ಒತ್ತುವರಿ ಪ್ರಮಾಣ, ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳ ವಿವರವನ್ನು ಒಳಗೊಂಡ ಸಮಗ್ರ ಮಾಹಿತಿಯನ್ನು ಪಾಲಿಕೆಗೆ ನೀಡಬೇಕು.

ಪಾಲಿಕೆಯ ಕೆರೆ ವಿಭಾಗದಿಂದ ವಿವರವಾದ ಯೋಜನಾ ವರದಿ ತಯಾರಿಸಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಕೆಆರ್‌ಐಡಿಎಲ್‌ನಿಂದ ನಿರ್ವಹಿಸುವಂತಿಲ್ಲ. ಕೆಟಿಟಿಪಿ ಕಾಯ್ದೆಯ ಅನ್ವಯ ಟೆಂಡರ್ ಕರೆದು ಕಾಮಗಾರಿ ನಿರ್ವಹಣೆ ಮಾಡಬೇಕು. ಕೆರೆಗಳಲ್ಲಿ ಯಾವುದೇ ವಿಧವಾದ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಅವುಗಳನ್ನು ಭೋಗ್ಯ ಅಥವಾ ಉಪ ಭೋಗ್ಯಕ್ಕೆ ನೀಡುವಂತಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಷರತ್ತು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.