ADVERTISEMENT

‘ಶಬ್ದ ಮಾಲಿನ್ಯ–ಕ್ರಮ ಆರಂಭ’

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 19:19 IST
Last Updated 2 ಜುಲೈ 2021, 19:19 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಹೈಕೋರ್ಟ್‌ ಪದೇ ಪದೇ ಆದೇಶ ನೀಡಿದ ಬಳಿಕ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ನಗರ ಪೊಲೀಸರು ಆರಂಭಿಸಿದ್ದಾರೆ. ಈ ಕುರಿತು ನಗರ ‍ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್‌ಪಿಸಿಬಿ) ಮೂಲಕ ಸ್ವೀಕರಿಸಿದ 11 ದೂರುಗಳ ವಿಚಾರಣೆ ಆರಂಭಿಸಲಾಗಿದೆ.ಧಾರ್ಮಿಕ ಸ್ಥಳಗಳಿಂದ ಶಬ್ದ ಮಾಲಿನ್ಯ ಹೆಚ್ಚುತ್ತಿದೆ ಎಂಬ ದೂರುಗಳು ಬಂದಿವೆ’ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

‘ಶಬ್ದ ಮಾಪನ ಉಪಕರಣ ನಿರ್ವಹಿಸುವ ಸಂಬಂಧ ಕೆಎಸ್‌ಪಿಸಿಬಿಯಿಂದ ಪೊಲೀಸ್ ಸಿಬ್ಬಂದಿಗೆ ತರಬೇತಿಯನ್ನು ಕಳೆದ ಅಕ್ಟೋಬರ್‌ನಲ್ಲೇ ಕೊಡಿಸಲಾಗಿದೆ. ಎಲ್ಲ ಠಾಣೆಗಳಿಗೆ ಉಪಕರಣ ಒದಗಿಸಲಾಗಿದೆ. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಜಾರಿಗೆ ತರಲು ಮತ್ತು ನಿಯಮ ಉಲ್ಲಂಘಿಸಿದವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 15ರ ಅಡಿಯಲ್ಲಿ ಪ್ರಕರಣ ದಾಖಲಿಸಲು ತಿಳಿಸಲಾಗಿದೆ’ ಎಂದು ವಿವರಿಸಿದ್ದಾರೆ.

ADVERTISEMENT

ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಎಸಿಪಿಗಳಿಗೆ ಅಧಿಕಾರ ಇದೆಯೇ ಎಂಬುದರ ಬಗ್ಗೆ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸುವಂತೆ ನಗರ ಪೊಲೀಸ್ ಕಮಿಷನರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿತು.

ಧಾರ್ಮಿಕ ಕೇಂದ್ರಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಿ ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಆದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.