ಬೆಂಗಳೂರು: ಅಲೆಮಾರಿ ಸಮುದಾಯದ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಕೊಲೆಯಂತಹ ಗಂಭೀರ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆ ಆಗ್ರಹಿಸಿದೆ.
ಮಾಜಿ ಸಚಿವ ಎಚ್. ಆಂಜನೇಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವೇದಿಕೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು.
ಜುಲೈ 9ರಂದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲ್ಲೂಕಿನ ತಾವರೆಕೆರೆಯಲ್ಲಿ ಅರುಣಾ ಎಂಬ ತಿಳ್ಳೆಕ್ಯಾತ ಸಮುದಾಯದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಲಾಯಿತು. ಬಾಲಕಿಯ ಸಾವಿಗೆ ಸಂತಾಪ ಸೂಚಿಸಲಾಯಿತು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ಧರ್ಮಸೇನ, ಸಾಹಿತಿಗಳಾದ ಎಸ್.ಜಿ. ಸಿದ್ದರಾಮಯ್ಯ, ಬಂಜಗೆರ ಜಯಪ್ರಕಾಶ್, ವಡ್ಡಗೆರೆ ನಾಗರಾಜಯ್ಯ, ಬಾಲಗುರುಮೂರ್ತಿ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಅಂಬಣ್ಣ ಆರೋಲಿಕರ, ಭೀಮಾಶಂಕರ್ ಹಾಗೂ ಅಲೆಮಾರಿ ಸಮುದಾಯದ ಮುಖಂಡ ಶೇಷಪ್ಪ ಅಂದೋಳ್ ಸಲಹೆಗಳನ್ನು ನೀಡಿದರು.
ಸದ್ಯದಲ್ಲೇ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗಿ, ಅಲೆಮಾರಿ ಸಮುದಾಯದವರ ಮೇಲೆ ರಾಜ್ಯದ ಹಲವೆಡೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಶೋಷಣೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಅಲೆಮಾರಿ ಸಮುದಾಯಗಳನ್ನು ಸಂಘಟಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಯಿತು. ಸಂತ್ರಸ್ತೆಯರ ಕುಟುಂಬಗಳಿಗೆ ಆರ್ಥಿಕ ನೆರವು, ಉದ್ಯೋಗ ನೀಡಲು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಅಲೆಮಾರಿ ಸಮುದಾಯದ ಮುಖಂಡರಾದ ಚಾವಡೆ ಲೋಕೇಶ್, ಲೋಹಿತ್, ಕೆ. ವೀರೇಶ್, ಸುಭಾಷ್ ಚವಾಣ್, ಶಾಂತರಾಜ್, ಶಿವಕುಮಾರ್ ಬಳ್ಳಾರಿ, ಹನುಮಂತು, ಬಸವರಾಜ್ ನಾರಾಯಣಕೆರೆ, ಸಾವಿತ್ರಮ್ಮ ರತ್ನಾಕರ್, ಮಹಾಂತೇಶ್ ಸಂಕಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.