ಬೆಂಗಳೂರು: ಭೀಮನ ಅಮಾವಾಸ್ಯೆ ಸೋಮವಾರ ಇದ್ದು, ಶ್ರಾವಣ ಮಾಸದ ಆರಂಭದ ಮುನ್ನಾದಿನವಾದ ಭಾನುವಾರ ಮಾಂಸ ವ್ಯಾಪಾರದ ಭರಾಟೆ ಜೋರಾಗಿತ್ತು.
ಸೋಮವಾರದಿಂದ ಶ್ರಾವಣ ಮಾಸ ಆರಂಭಗೊಳ್ಳುತ್ತಿದೆ. ಹಿಂದೂ ಸಂಪ್ರದಾಯ ಪಾಲಿಸುವ ಅನೇಕರು ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವುದಿಲ್ಲ. ಹಾಗಾಗಿ ನಗರದ ಮೈಸೂರು ರಸ್ತೆ, ಕೆ.ಆರ್.ಮಾರುಕಟ್ಟೆ, ಪಾಪಣ್ಣ ಮಟನ್ ಸ್ಟಾಲ್, ನಾಗರಬಾವಿ, ಮಲ್ಲೇಶ್ವರ, ಶಿವಾಜಿನಗರದ ಮಾಂಸದಂಗಡಿಗಳ ಮುಂದೆ ಜನ ಭಾನುವಾರ ಸಾಲುಗಟ್ಟಿ ನಿಂತಿದ್ದರು.
ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಭಾನುವಾರ ಲಾಕ್‍ಡೌನ್ ನಿಯಮ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮಾಂಸದಂಗಡಿಗಳೂ ಇರುವುದರಿಂದ ಪ್ರತಿ ಭಾನುವಾರವೂ ಇವು ವಹಿವಾಟು ನಡೆಸಿದವು. ಆದರೆ, ಕಳೆದ ಭಾನುವಾರಕ್ಕೆ ಹೋಲಿಸಿದರೆ ಈ ಬಾರಿ ಮಾಂಸದಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು ಇತ್ತು.
ಲಾಕ್‍ಡೌನ್‍ನಿಂದ ಮಾಂಸದಂಗಡಿಗಳು ಮಧ್ಯಾಹ್ನ 12ರವರೆಗೆ ಮಾತ್ರ ತೆರೆದಿದ್ದವು. ಹೀಗಾಗಿ ನಗರದ ಎಲ್ಲ ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೇ ಮಾಂಸ ಖರೀದಿಗೆ ಜನ ಸಾಲುಗುಟ್ಟಿ ನಿಂತಿದ್ದರು. ಖರೀದಿ ವೇಳೆ ಕೆಲ ಅಂಗಡಿಗಳಲ್ಲಿ ಜನ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.