ADVERTISEMENT

ಉದ್ಯಾನದಲ್ಲಿ ಮನೆ ನಿರ್ಮಾಣಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:40 IST
Last Updated 16 ಜುಲೈ 2022, 19:40 IST

ಬೆಂಗಳೂರು: ಉದ್ಯಾನಕ್ಕೆ ಮೀಸಲಿಟ್ಟ ನಿವೇಶನದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಲು ಉದ್ದೇಶಿಸಿರುವ 100 ಮನೆಗಳ ನಿರ್ಮಾಣಕ್ಕೆ ತಡೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರು ಉತ್ತರ ತಾಲ್ಲೂಕು ಯಶವಂತಪುರ ಗ್ರಾಮದ ನಾಗರಭಾವಿಯಲ್ಲಿ, 'ಶ್ರೀ ವಿನಾಯಕ ಹೌಸಿಂಗ್ ಕೋ-ಆಪ್ ಸೊಸೈಟಿ' ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಉದ್ಯಾನಕ್ಕೆ ಮೀಸ ಲಿಟ್ಟ ಪ್ರದೇಶದ ಬಳಕೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಈ ಕುರಿತಂತೆ ನಾಗರಭಾವಿ 11ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ವಿನಾಯಕ ಲೇ ಔಟ್ ಸಿಟಿಜನ್ ಫೋರಂ ಮತ್ತು ನಾಗರಭಾವಿ ಎರಡನೇ ಹಂತದ 13ನೇ ಬಿಡಿಎ ಲೇ ಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ADVERTISEMENT

ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿ, ಬಿಡಿಎ ಆಯುಕ್ತ, ಬಿಡಿಎ ಅಧ್ಯಕ್ಷ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.