ADVERTISEMENT

ಇಂದಿರಾ ಕಿಚನ್‌ ಗುತ್ತಿಗೆದಾರರಿಗೆ ನೋಟಿಸ್‌

ಬೊಮ್ಮನಹಳ್ಳಿ ವಲಯ: ಅಡುಗೆಮನೆಯಲ್ಲಿ ಕೊಳೆತ ತರಕಾರಿ– ಕಳಪೆ ಅಕ್ಕಿ ‍ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:39 IST
Last Updated 30 ಜೂನ್ 2019, 19:39 IST
   

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಸುವ ಆಹಾರ ತಯಾರಿಸುವ ಅಡುಗೆಮನೆಯಲ್ಲಿ ಕಳಪೆ ಅಕ್ಕಿ, ಕೊಳೆತ ತರಕಾರಿ ಪತ್ತೆಯಾದ ಪ್ರಕರಣ ಸಂಬಂಧ ಗುತ್ತಿಗೆದಾರರಿಗೆ ಪಾಲಿಕೆ ಜಂಟಿ ಆಯುಕ್ತರು ನೋಟಿಸ್‌ ನೀಡಿದ್ದಾರೆ.

‘ಬೊಮ್ಮನಹಳ್ಳಿ ಇಂದಿರಾ ಕಿಚನ್‌ ನಿರ್ವಹಣೆಯ ಗುತ್ತಿಗೆಯನ್ನು ‘ರಿವಾರ್ಡ್ಸ್‌’ ಕಂಪನಿಗೆ ನೀಡಲಾಗಿತ್ತು. ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಅವರಿಗೆ ನೋಟಿಸ್‌ ನೀಡಲಾಗಿದೆ ಮತ್ತು ಬಿಲ್‌ ತಡೆ ಹಿಡಿಯಲಾಗಿದೆ’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಡಾ. ಎ. ಸೌಜನ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಡುಗೆಮನೆ ಮೇಲ್ವಿಚಾರಕರು ಮತ್ತು ಗುತ್ತಿಗೆದಾರರಿಂದ ಈ ಕುರಿತು ಹೇಳಿಕೆ ಪಡೆಯಲಾಗುವುದು. ಹಿರಿಯ ಆರೋಗ್ಯಾಧಿಕಾರಿ ನೀಡುವ ಮಾಹಿತಿ ಆಧರಿಸಿ ತಯಾರಿಸಿದ ವರದಿಯನ್ನು ಕೇಂದ್ರ ಕಚೇರಿಗೆಕಳುಹಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ರಿವಾರ್ಡ್ಸ್‌ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಬಲದೇವ್‌ ಸಿಂಗ್‌ ಸಿದ್ದು, ‘ಕಸ ಒಯ್ಯುವವರು ನಾಲ್ಕು ದಿನಗಳಿಂದ ಬಂದಿರಲಿಲ್ಲ. ಬಿಸಾಡಲು ಹೊರಗಿಟ್ಟಿದ್ದ ತರಕಾರಿ ವಿಡಿಯೊ ಮಾಡಲಾಗಿದೆ’ ಎಂದು ತಿಳಿಸಿದರು.

ಅಡುಗೆ ಮನೆಯ ಒಳಗಡೆ ಇದ್ದ ಅಕ್ಕಿ ಹಾಗೂ ಬೇಳೆಯೂ ಹಾಳಾಗಿದ್ದ ಕುರಿತು ಪ್ರಶ್ನಿಸಿದಾಗ, ‘200 ಮೂಟೆ ಅಕ್ಕಿ ಬಂದಿತ್ತು. ಅದರಲ್ಲಿ ಏಳೆಂಟು ಬ್ಯಾಗ್‌ ತೆರೆದಿಡಲಾಗಿತ್ತು. ಆಎಲ್ಲ ಬ್ಯಾಗುಗಳಲ್ಲಿ ಹುಳಗಳು ಇದ್ದುದರಿಂದ ಅವುಗಳನ್ನು ಬಳಸದೇ ಹಾಗೇ ಇಟ್ಟಿದ್ದೆವು. ಅನ್ನ ಮಾಡಲುಆ ಅಕ್ಕಿಯನ್ನು ಬಳಸಿಲ್ಲ. ಕಳಪೆ ಅಕ್ಕಿಯನ್ನು ಪೂರೈಸಿದವರಿಗೂ ಕರೆ ಮಾಡಿ, ಎಲ್ಲ ಮೂಟೆಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದ್ದೆವು. ಅವರು ಬರುವಾಗ ತಡವಾಯಿತು’ ಎಂದು ಅವರುಸ್ಪಷ್ಟಪಡಿಸಿದರು.

‘ನಗರದಲ್ಲಿ ಒಟ್ಟು 88 ಇಂದಿರಾ ಕ್ಯಾಂಟೀನ್‌ ಮತ್ತು 10 ಅಡುಗೆ ಮನೆಗಳನ್ನು ನಾವು ನಿರ್ವಹಿಸುತ್ತಿದ್ದೇವೆ. ಬೊಮ್ಮನಹಳ್ಳಿಯ ಅಡುಗೆ ಮನೆಯಿಂದ ಏಳು ಕ್ಯಾಂಟೀನ್‌ಗಳಿಗೆ ಈ ಆಹಾರ ಪೂರೈಸಲಾಗುತ್ತದೆ.ಒಂದು ಹೊತ್ತಿಗೆ 11 ಸಾವಿರ ಪೌರಕಾರ್ಮಿಕರಿಗೆ ನಾವು ಆಹಾರ ಪೂರೈಸುತ್ತಿದ್ದೇವೆ. ಬೇರೆ ಯಾರೂ ದೂರು ನೀಡಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಸಿಂಗ್‌ ಹೇಳಿದರು.

ಕಿಚನ್‌ ನಾವು ನಿರ್ವಹಿಸುತ್ತಿಲ್ಲ: ಶೆಫ್‌ ಟಾಕ್‌ ಸ್ಪಷ್ಟನೆ

‘ಬೊಮ್ಮನಹಳ್ಳಿ ಕಿಚನ್‌ ನಿರ್ವಹಿಸುತ್ತಿರುವುದು ಶೆಫ್‌ ಟಾಕ್‌ ಕಂಪನಿಯಲ್ಲ. ಪಾಲಿಕೆಯ ಜಂಟಿ ಆಯುಕ್ತರಾದ ಸರ್ಫರಾಜ್‌ ಖಾನ್‌ ಅವರು ಮಾಹಿತಿ ಕೊರತೆಯಿಂದ ನಮ್ಮ ಕಂಪನಿ ಹೆಸರು ಉಲ್ಲೇಖಿಸಿದ್ದಾರೆ’ ಎಂದು ಶೆಫ್‌ಟಾಕ್‌ಫುಡ್‌ ಆ್ಯಂಡ್‌ ಹಾಸ್ಪಿಟಾಲಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಸ್ಪಷ್ಟಪಡಿಸಿದರು.

‘ಬೆಂಗಳೂರಿನಲ್ಲಿರುವ 198 ಇಂದಿರಾ ಕ್ಯಾಂಟೀನ್‌ಗಳ ಪೈಕಿ ನಮ್ಮ ಸಂಸ್ಥೆ 108 ಕ್ಯಾಂಟೀನ್‌ಗಳ ಮತ್ತು 8 ಅಡುಗೆಮನೆಗಳ ನಿರ್ವಹಣೆಯ ಗುತ್ತಿಗೆಯನ್ನು ಪಡೆದಿದೆ. ಆಹಾರದ ಗುಣಮಟ್ಟ ಕಾಪಾಡುವುದು ನಮ್ಮ ಮೊದಲ ಆದ್ಯತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.