ADVERTISEMENT

ಮೆಟ್ರೊ ಪಿಲ್ಲರ್ ಕುಸಿದು ತಾಯಿ–ಮಗು ಸಾವು: ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 2:42 IST
Last Updated 1 ಫೆಬ್ರುವರಿ 2023, 2:42 IST
   

ಬೆಂಗಳೂರು: ಹೆಣ್ಣೂರು–ನಾಗವಾರ ಮಧ್ಯೆ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದು ಮಹಿಳೆ ಮತ್ತು ಗಂಡು ಮಗು ಸಾವಿಗೀಡಾಗಿದ್ದ ಘಟನೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವೂ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‍ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಎಂಆರ್‌ಸಿಎಲ್‌ ಮುಖ್ಯ ಎಂಜಿನಿಯರ್‌ ಹಾಗೂ ಮೆಸರ್ಸ್‌ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ ಲಿಮಿಟೆಡ್‌ನ (ಎನ್‌ಸಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ADVERTISEMENT

‘ಪಿಲ್ಲರ್‌ ಕುಸಿತ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಗುಂಡಿ ಬಿದ್ದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳನ್ನು ಆಧರಿಸಿ ಈ ಪಿಐಎಲ್‌ ದಾಖಲಿಸಿಕೊಳ್ಳಲಾಗಿದೆ. ಮಹಿಳೆ ಮತ್ತು ಅಂಬೆಗಾಲಿಡುವ ಮಗು ವೊಂದರ ದುರದೃಷ್ಟಕರ ಸಾವಿನ ಸುದ್ದಿಗಳು ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಿ’ ಎಂದು ಬಿಎಂಆರ್‌ ಸಿಎಲ್‌ಗೆ ನ್ಯಾಯಪೀಠ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.