ADVERTISEMENT

ಉನ್ನತ ಶಿಕ್ಷಣ ಇಲಾಖೆಗೆ ನೋಟಿಸ್‌

ಕೆಸ್‌ಒಯು ವಿವಿ ಕುಲಪತಿ ವಜಾ ಕೋರಿದ ರಿಟ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:47 IST
Last Updated 3 ಜೂನ್ 2022, 19:47 IST

ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿ ಹುದ್ದೆಯಿಂದ ಎಸ್.ವಿದ್ಯಾಶಂಕರ್ ಅವರನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದ ಪಿಎಂಇ (ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ) ಮಂಡಳಿ ಸದಸ್ಯ ಕೆ. ಮಹದೇವ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕುಲಪತಿ ವಿದ್ಯಾಶಂಕರ್‌ ಸೇರಿದಂತೆ ನಾಲ್ವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.‌

ಕೆಎಸ್‌ಒಯು ಕುಲಪತಿ ಹುದ್ದೆಗೆ ಎಸ್.ವಿದ್ಯಾಶಂಕರ್ ಅವರನ್ನು 2019ರ ಮೇ 30ರಂದು ನೇಮಕ ಮಾಡಲಾಗಿತ್ತು. 2022ರ ಮೇ 30ಕ್ಕೆ ಅವರ ಅಧಿಕಾರಾವಧಿ ಮುಕ್ತಾಯವಾಗಬೇಕಿತ್ತು. ಆದರೆ, ಪುನಃ ಒಂದು ವರ್ಷದ ಅವಧಿಗೆ ವಿಸ್ತರಿಸಿ ರಾಜ್ಯಪಾಲರು 2022ರ ಏಪ್ರಿಲ್ 6ರಂದು ಆದೇಶಿಸಿದ್ದರು. ಈ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ADVERTISEMENT

‘ಬೆಂಗಳೂರಿನ ಬಿಐಟಿ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿ ಎಸ್. ವಿದ್ಯಾಶಂಕರ್ ಕಾರ್ಯನಿರ್ವಹಿಸಿದ್ದರು. ಈ ವೇಳೆ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಈ ಆರೋಪದ ಹೊರತಾಗಿಯೂ ವಿದ್ಯಾಶಂಕರ್ ಅವರನ್ನು ಕೆಎಸ್‌ಒಯು ಕುಲಪತಿ ಹುದ್ದೆಗೆ ಮೂರು ವರ್ಷದ ಅವಧಿಗೆ ನೇಮಿಸಿ 2019ರ ಮೇ 30ರಂದು ರಾಜ್ಯಪಾಲರು ಆದೇಶಿಸಿದ್ದಾರೆ’ ಎಂಬುದು ಅರ್ಜಿದಾರರು ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.