ADVERTISEMENT

ಲಾಭದಾಯಕ ಹುದ್ದೆ ಪ್ರಕರಣ: ಎಸ್.ಆರ್.ವಿಶ್ವನಾಥ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 26 ಮೇ 2022, 18:15 IST
Last Updated 26 ಮೇ 2022, 18:15 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧ್ಯಕ್ಷರಾಗಿ ಲಾಭದಾಯಕ ಹುದ್ದೆ ಹೊಂದಿರುವ ಎಸ್.ಆರ್. ವಿಶ್ವನಾಥ್ ಅವರನ್ನು ಶಾಸಕಸ್ಥಾನದಿಂದ ಅನರ್ಹಗೊಳಿಸಬೇಕು’ ಎಂದು ಸಲ್ಲಿಸಿರುವ ಅರ್ಜಿ ಕುರಿತಂತೆ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಬೆಂಗಳೂರು ವಕೀಲ ಎ.ಎಸ್. ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರಕರಣದ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿತು.

ADVERTISEMENT

‘2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಯಲಹಂಕ ಕ್ಷೇತ್ರದಿಂದ ಎಸ್.ಆರ್.ವಿಶ್ವನಾಥ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿದ ವಿವರಗಳ ಪ್ರಕಾರ, ವಿಶ್ವನಾಥ್ಕೃಷಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡ ಹಾಲಿ ಶಾಸಕರಾಗಿದ್ದಾರೆ.

ಸಂವಿಧಾನದ 191(1) (ಎ) ವಿಧಿಯ ಅನುಸಾರ ಸಂಸದರು ಹಾಗೂ ಶಾಸಕರಾದವರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಒಂದು ವೇಳೆ ಲಾಭದಾಯಕ ಹುದ್ದೆ ಹೊಂದಿದ್ದರೆ ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹರಾಗುತ್ತಾರೆ’ ಎಂಬುದು ಅರ್ಜಿದಾರರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.