ADVERTISEMENT

ಕೆಂಪೇಗೌಡ ಬಡಾವಣೆ: ಬಿಸಿಲಿಗೆ ಸಾಯುತ್ತಿವೆ ಸಸಿಗಳು

ಮಳೆಗಾಲ ಮುಗಿದ ಬಳಿಕ ಸಸಿ ನೆಟ್ಟ ಬಿಡಿಎ

ಪ್ರವೀಣ ಕುಮಾರ್ ಪಿ.ವಿ.
Published 2 ಮಾರ್ಚ್ 2020, 19:24 IST
Last Updated 2 ಮಾರ್ಚ್ 2020, 19:24 IST
ಕೆಂಪೇಗೌಡ ಬಡಾವಣೆಯಲ್ಲಿ ನೆಟ್ಟಿರುವ ಸಸಿಗಳು ಒಣಗಿರುವುದು
ಕೆಂಪೇಗೌಡ ಬಡಾವಣೆಯಲ್ಲಿ ನೆಟ್ಟಿರುವ ಸಸಿಗಳು ಒಣಗಿರುವುದು   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನೆಟ್ಟಿರುವ ಸಸಿಗಳು ವರ್ಷ ಕಳೆಯುವ ಮುನ್ನವೇ ಜೀವವನ್ನೂ ಕಳೆದುಕೊಳ್ಳುತ್ತಿವೆ.

ಕೆಂಪೇಗೌಡ ಬಡಾವಣೆ ಅಭಿವೃದ್ಧಿಗಾಗಿ ಬಿಡಿಎ ಲಕ್ಷಾಂತರ ಗಿಡ–ಮರಗಳನ್ನು ತೆರವುಗೊಳಿಸಿತು. ಈ ಬಡಾವಣೆಯಲ್ಲಿ 2016ರ ಅಕ್ಟೋಬರ್‌ನಲ್ಲಿ ಮೊದಲ ಹಂತದಲ್ಲಿ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಆದರೆ, 2019ರವರೆಗೂ ಇಲ್ಲಿ ಗಿಡಗಳನ್ನು ಬೆಳೆಸಿರಲಿಲ್ಲ. ಬಡಾವಣೆಗಳಲ್ಲಿ ಗಿಡ ಬೆಳೆಸುವ ಸಲುವಾಗಿ ಎಂಟು ವರ್ಷಗಳ ಹಿಂದೆ ಆರಂಭಿಸಿದ್ದ ‘ಹಸಿರು ಮಾಲಾ’ ಯೋಜನೆಗೂ 2017–18 ಮತ್ತು 2018–19ನೇ ಸಾಲಿನಲ್ಲಿ ಅನುದಾನವನ್ನೇ ನೀಡಿರಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ 2019ರ ಫೆಬ್ರುವರಿಯಲ್ಲಿ ವಿಸ್ತೃತವಾದ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಬಳಿಕ ಪ್ರಾಧಿಕಾರವು 2019–20ನೇ ಸಾಲಿನಲ್ಲಿ ಹಸಿರೀಕರಣಕ್ಕಾಗಿ ₹2 ಕೋಟಿ ಮಂಜೂರು ಮಾಡಿತ್ತು.

‘2019–20ನೇ ಸಾಲಿನಲ್ಲಿ ಸುಮಾರು 20 ಸಾವಿರ ಗಿಡಗಳನ್ನು ನೆಟ್ಟಿದ್ದೇವೆ. ವಿಶ್ವೇಶ್ವರಯ್ಯ ಬಡಾವಣೆ, ಬನಶಂಕರಿ, ಅಂಜನಾಪುರ ಹಾಗೂ ಕೆಂಪೇಗೌಡ ಬಡಾವಣೆಗಳಲ್ಲಿ ಗಿಡಗಳನ್ನು ಬೆಳೆಸಿದ್ದೇವೆ. ಕೆಂಪೇಗೌಡ ಬಡಾವಣೆಯೊಂದರಲ್ಲೇ 8,400 ಗಿಡಗಳನ್ನು ನೆಟ್ಟಿದ್ದೇವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಗಿಡಗಳನ್ನು ನೆಟ್ಟರೆ ಸಾಲದು. ಅವುಗಳನ್ನು ಬೆಳೆಸುವ ಬಗ್ಗೆಯೂ ಕಾಳಜಿ ವಹಿಸಬೇಕು. ನೆಟ್ಟಿರುವ ಗಿಡಗಳ ಪೈಕಿ ಶೇ 40ಕ್ಕೂ ಹೆಚ್ಚು ಗಿಡಗಳು ಸತ್ತಿವೆ’ ಎಂದು ಕೆಂಪೇಗೌಡ ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆಯ ಶ್ಯಾಂ ಬೇಸರ ವ್ಯಕ್ತಪಡಿಸಿದರು.

‘ರಸ್ತೆ ಪಕ್ಕದಲ್ಲಿ ಗಿಡಗಳನ್ನು ನೆಡುವ ಬದಲು ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ, ರಾಜಕಾಲುವೆಗಳ ಮೀಸಲು ಪ್ರದೇಶಗಳಲ್ಲಿ, ಆಟದ ಮೈದಾನಗಳ ಅಂಚಿನಲ್ಲಿ ನೆಡುವಂತೆ ಸಲಹೆ ನೀಡಿದ್ದೆವು. ಆದರೂ, ಅನೇಕ ಕಡೆ ರಸ್ತೆ ಪಕ್ಕದಲ್ಲೇ ಗಿಡಗಳನ್ನು ನೆಟ್ಟಿದ್ದಾರೆ. ರಸ್ತೆ, ಒಳಚರಂಡಿ, ನೀರಿನ ಕೊಳವೆ ಮುಂತಾದ ಸೌಕರ್ಯ ಕಲ್ಪಿಸುವಾಗ ಅವುಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದರು.

‘ನಿವೇಶನದ ಪ್ರವೇಶಕ್ಕೆ ರಸ್ತೆಯಗಲದಷ್ಟು ಜಾಗಬಿಟ್ಟು ಗಿಡ ನೆಡುವಂತೆ ಹೇಳಿದ್ದೆವು. ಆದರೂ ಉದ್ದಕ್ಕೂ ಗಿಡ ನೆಟ್ಟಿದ್ದಾರೆ. ನಿವೇಶನದಾರರ ಮನೆ ಕಟ್ಟುವಾಗ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ವೇದಿಕೆಯ ಸೂರ್ಯಕಿರಣ್‌.

‘ಕೆಂಪೇಗೌಡ ಬಡಾವಣೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ರಸ್ತೆಗಳ ಬಳಿ ಕುಡಿಯುವ ನೀರು ಹಾಗೂ ಒಳಚರಂಡಿ ಕೊಳವೆಗಳನ್ನು ಅಳವಡಿಸಬೇಕಾಗಿದೆ. ಹಾಗಾಗಿ ಅಲ್ಲಿ ಗಿಡಗಳನ್ನು ನೆಟ್ಟಿಲ್ಲ. ಉದ್ಯಾನಕ್ಕೆ ಕಾಯ್ದಿರಿಸಿದ ಜಾಗಗಳಲ್ಲಿ ಹಾಗೂ ಎಲ್ಲೆಲ್ಲಿ ಖಾಲಿ ಜಾಗ ಲಭ್ಯ ಎಂಬುದನ್ನು ನೋಡಿಕೊಂಡು ಗಿಡಗಳನ್ನು ನೆಟ್ಟಿದ್ದೇವೆ. ನೆರಳು ನೀಡುವ ಜಾತಿಯ ಹೊಂಗೆ, ಮಹಾಗನಿ, ಟಬೂಬಿಯಾ, ಹೊಳೆ ದಾಸವಾಳ, ಸಂಪಿಗೆ, ಚೆರ‍್ರಿ ಜಾತಿಯ ಗಿಡಗಳನ್ನು ಬೆಳೆಸಿದ್ದೇವೆ. ಇವುಗಳ ನಿರ್ವಹಣೆಯನ್ನು ಇಬ್ಬರು ಗುತ್ತಿಗೆದಾರರಿಗೆ ವಹಿಸಿದ್ದೇವೆ. ಇದೇ ಮಾರ್ಚ್‌ ಅಂತ್ಯದವರೆಗೂ ಅವರೇ ಅವುಗಳ ನಿರ್ವಹಣೆ ಮಾಡಬೇಕು’ ಎಂದು ಬಿಡಿಎ ಅರಣ್ಯ ವಿಭಾಗದ ವಲಯ ಅರಣ್ಯ ಅಧಿಕಾರಿ ಗಂಗಾಧರಯ್ಯ ಅವರು ತಿಳಿಸಿದರು.

‘ಗಿಡಗಳು ಸತ್ತಿದ್ದರೆ ಅವುಗಳ ಜಾಗದಲ್ಲಿ ಬೇರೆ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳುತ್ತೇವೆ. ಗಿಡಗಳಿಗೆ ನೀರುಣಿಸುವಂತೆ ಗುತ್ತಿಗೆದಾರರಿಗೆ ಸೂಚಿಸುತ್ತೇವೆ’ ಎಂದರು.

‘ಕಳೆದ ವರ್ಷದ ನೆಟ್ಟ ಗಿಡಗಳ ನಿರ್ವಹಣೆ ಅವಧಿ ಇದೇ ಮಾರ್ಚ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಮತ್ತೆ ಮಳೆಗಾಲ ಆರಂಭವಾಗುವವರೆಗೆ ಮೂರು ತಿಂಗಳು ನೀರುಣಿಸಲು ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಕಳೆದ ವರ್ಷ ನೆಟ್ಟಿರುವ ಅಷ್ಟೂ ಗಿಡಗಳು ಸಾಯುವ ಅಪಾಯವಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಮುಖ್ಯಸ್ಥರಿಲ್ಲದೆ ಸೊರಗುತ್ತಿದೆ ಅರಣ್ಯ ವಿಭಾಗ
ಬಿಡಿಎ ನೆಟ್ಟಿರುವ ಸಸಿಗಳು ನೀರುಣಿಸದ ಕಾರಣ ಸೊರಗುತ್ತಿದ್ದರೆ, ಗಿಡಗಳನ್ನು ನೆಟ್ಟು ಬೆಳೆಸಬೇಕಾದ ಬಿಡಿಎ ಅರಣ್ಯ ಮತ್ತು ತೋಟಗಾರಿಕ ವಿಭಾಗ ಮುಖ್ಯಸ್ಥರೇ ಇಲ್ಲದೇ ಸೊರಗಿದೆ.

ವಿಭಾಗದ ಉಪರಣ್ಯ ಸಂರಕ್ಷಣಾಧಿಕಾರಿಯಾಗಿದ್ದ (ಡಿಸಿಎಫ್) ಗೋಪಿನಾಥ್‌ 2019ರ ಜುಲೈನಲ್ಲಿ ವರ್ಗವಾಗಿದ್ದರು. ಬಳಿಕ, ಸಹಾಯಕ ಅರಣ್ಯಾಧಿಕಾರಿ (ಎಸಿಎಫ್‌) ಸದಾನಂದಪ್ಪ ಅವರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿತ್ತು. ಇತ್ತೀಚೆಗೆ ಅವರಿಗೂ ವರ್ಗಾವಣೆಯಾಗಿದೆ. ಅವರ ಜಾಗಕ್ಕೆ ಬೇರೆಯವರು ನೇಮಕಗೊಂಡಿಲ್ಲ. ಹಾಗಾಗಿ ಹಸಿರೀಕರಣ ಯೋಜನೆಗಳೂ ಹಳ್ಳಹಿಡಿಯುತ್ತಿವೆ.

ಅನುದಾನ ಅನುಮಾನ
2019ರ ಫೆಬ್ರುವರಿ ಬಳಿಕ ಬಿಡಿಎ ಆಡಳಿತ ಮಂಡಳಿ ಸಭೆ ಒಮ್ಮೆಯೂ ನಡೆದಿಲ್ಲ. 2020ರ ಫೆಬ್ರುವರಿಯಲ್ಲಿ ನಿಗದಿಯಾಗಿದ್ದ ಸಭೆಯೂ ಮುಂದೂಡಿಕೆಯಾಗಿದೆ. ಪ್ರಾಧಿಕಾರವು ಹಣಕಾಸಿನ ಮುಗ್ಗಟ್ಟನ್ನೂ ಎದುರಿಸುತ್ತಿದೆ. ಈ ಬಾರಿಯೂ ಹಸಿರೀಕರಣಕ್ಕೆ ಅನುದಾನ ಸಿಗುವುದು ಅನುಮಾನ ಎನ್ನುತ್ತವೆ ಬಿಡಿಎ ಮೂಲಗಳು.

‘ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟರೆ ಚೆನ್ನಾಗಿ ಬೆಳೆಯುತ್ತವೆ. 2019–20ನ ಸಾಲಿನಲ್ಲಿ ಹಸಿರೀಕರಣಕ್ಕೆ ಅನುದಾನ ಮಂಜೂರು ಮಾಡುವಾಗ ಮಳೆಗಾಲ ಮುಗಿದಿತ್ತು. ನಂತರ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳುವುದು ಬಲು ಕಷ್ಟ. ಈ ಬಾರಿ ಮಳೆಗಾಲಕ್ಕೆ ಮುನ್ನವೇ ಅನುದಾನ ಮಂಜೂರಾದರೆ, ಮುಂಬರುವ ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಸುಲಭವಾಗಲಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.