ಬೆಂಗಳೂರು: ವಿಶ್ವದಾದ್ಯಂತ ಒಕ್ಕಲಿಗ ಸಮುದಾಯವನ್ನು ಸಂಪರ್ಕಿಸುವ ಮತ್ತು ಬೆಂಬಲಿಸುವಂತಹ ಎನ್‌ಆರ್‌ಐ ಒಕ್ಕಲಿಗ ವೇದಿಕೆಯನ್ನು ನಿರ್ಮಿಸುವ ಅಗತ್ಯವಿದೆ ಎಂದು ಅನಿವಾಸಿ ಭಾರತೀಯ ಫೋರಂ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದರು.
ಉದ್ಯಮಿ ಒಕ್ಕಲಿಗ ಎಕ್ಸ್‌ಪೊ 2025ರ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.
ವಿದೇಶದಲ್ಲಿ ನೆಲಸಿರುವ ಒಕ್ಕಲಿಗ ಸಮುದಾಯಗಳಿಗೆ ಮೀಸಲಾದ ಸೆಲ್ ರಚಿಸಬೇಕು. ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಭಾರತದ ಹೊರಗಿರುವ ಒಕ್ಕಲಿಗರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳಲು ಸಹಾಯ ಮಾಡಲಿದೆ. ಅನಿವಾಸಿ ಒಕ್ಕಲಿಗರನ್ನು ಸಂಪರ್ಕಿಸಲು, ಅಗತ್ಯ ಸಲಹೆಗಳನ್ನು ನೀಡಲು ಮತ್ತು ಮಾಹಿತಿ ಕಲೆ ಹಾಕಲು ಸಂಪನ್ಮೂಲವಾಗಿ ಕಾರ್ಯನಿರ್ವಹಿಸಲು ಉಪಯೋಗವಾಗಲಿದೆ ಎಂದರು.
‘ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎನ್‌ಆರ್‌ಐ ಫೋರಂ ಸ್ಥಾಪಿಸಲಾಗಿತ್ತು. ನಾನು ಉಪಾಧ್ಯಕ್ಷಳಾಗಿದ್ದೆ. ಈಗ ಸಿದ್ದರಾಮಯ್ಯ ಸರ್ಕಾರದ ಅಡಿಯಲ್ಲಿ ಎನ್‌ಆರ್‌ಐ ಸಮಿತಿಯನ್ನು ಪುನಃ ಸಕ್ರಿಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಎನ್‌ಆರ್‌ಐ ಕನ್ನಡಿಗರ ಅಗತ್ಯತೆಯನ್ನು ಪರಿಹರಿಸಲು ಶಾಶ್ವತವಾಗಿ ಮೀಸಲಾದ ಸಚಿವಾಲಯವನ್ನು ಸೃಷ್ಟಿಸುವ ಅಗತ್ಯವಿದೆ’ ಎಂದು ತಿಳಿಸಿದರು.
ಮಹಿಳಾ ಉದ್ಯಮಿಗಳ ವಿಚಾರ ಸಂಕಿರಣದಲ್ಲಿ ರಾಯಲ್ ಕಾನ್ಕರ್ಡ್ ಇಂಟರ್‌ನ್ಯಾಷನಲ್ ಸ್ಕೂಲ್ ಮ್ಯಾನೇಜಿಂಗ್ ಟ್ರಸ್ಟಿ ಶ್ರುತಿ ಚೇತನ್ ಗೌಡ, ದೆಹಲಿ ಪಬ್ಲಿಕ್ ಇಂಟರ್‌ನ್ಯಾಷನಲ್ ಸ್ಕೂಲ್ ಚೇರ್ ಪರ್ಸನ್ ಸುನೀತಾ ಗೌಡ, ಪ್ರಯಾಗ್ ಮಾಂಟೆಸ್ಸರಿಯ ಸ್ಥಾಪಕರಾದ ಅಮಿತಾ ಪ್ರಶಾಂತ್, ಆರ್‌ಆರ್‌ಆರ್ ಕ್ರಿಯೇಷನ್ಸ್ ನಿರ್ದೇಶಕಿ ಸ್ವಪ್ನಾ ಕೃಷ್ಣ, ಎಕ್ಸ್‌ಪೊ ಸಂಘಟಕಿ ಪುಣ್ಯವತಿ ಸಿ. ನಾಗರಾಜ್, ಇಂದಿರಾ ಫುಡ್ಸ್ ಸಂಸ್ಥಾಪಕಿ ಸಿ.ಇಂದಿರಾ ಚನ್ನೇಗೌಡ, ಪವಿತ್ರಾ ಹಳೆಕೋಟೆ, ಶಿಲ್ಪಾ ಗೌಡ, ಸವಿತಾ ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.