ADVERTISEMENT

2ಎ ಪಟ್ಟಿಗೆ ಲಿಂಗಾಯತ ಸಮುದಾಯ ಸೇರಿಸಲು ಆಗ್ರಹ

ಹಿಂದುಳಿದ ವರ್ಗಗಳ ಆಯೋಗದ ವಿಚಾರಣೆ: ಅಂತರ್ಜಾತಿ ವಿವಾಹಿತರಿಗೆ ಶೇ 15ರಷ್ಟು ಮೀಸಲಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 20:16 IST
Last Updated 17 ಜೂನ್ 2019, 20:16 IST
ಬೆಂಗಳೂರಿನಲ್ಲಿ ಸೋಮವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜ್ ಅವರು ಬಹಿರಂಗ ವಿಚಾರಣೆ ನಡೆಸಿದರು. ಸದಸ್ಯರಾದ ಎನ್‌.ಪಿ.ಧರ್ಮರಾಜ್‌, ಕೆ.ಎನ್‌.ನಿಂಗಪ್ಪ, ಶರಣಪ್ಪ ಡಿ.ಮಣೆಗಾರ್‌, ಜಿ.ಡಿ.ಗೋಪಾಲ್‌ ಇದ್ದರು –ಪ್ರಜಾವಾಣಿ ಚಿತ್ರ 
ಬೆಂಗಳೂರಿನಲ್ಲಿ ಸೋಮವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜ್ ಅವರು ಬಹಿರಂಗ ವಿಚಾರಣೆ ನಡೆಸಿದರು. ಸದಸ್ಯರಾದ ಎನ್‌.ಪಿ.ಧರ್ಮರಾಜ್‌, ಕೆ.ಎನ್‌.ನಿಂಗಪ್ಪ, ಶರಣಪ್ಪ ಡಿ.ಮಣೆಗಾರ್‌, ಜಿ.ಡಿ.ಗೋಪಾಲ್‌ ಇದ್ದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಈ ವರ್ಷದ ಪ್ರಥಮ ಬಹಿರಂಗ ವಿಚಾರಣೆ ಸೋಮವಾರ ನಗರದ ದೇವರಾಜ ಅರಸು ಭವನದಲ್ಲಿ ಆರಂಭವಾಗಿದ್ದು, ಸಮಸ್ತ ಲಿಂಗಾಯತ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಬೇಕೆಂಬ ಅರ್ಜಿಯೂ ವಿಚಾರಣೆಗೆ ಬರಲಿದೆ.

ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್‌ ಅವರು ಸೋಮವಾರ ಒಟ್ಟು 11 ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡರು. ಮಂಗಳವಾರ 12 ಅರ್ಜಿಗಳು ಹಾಗೂ ಬುಧವಾರ 13 ಅರ್ಜಿಗಳನ್ನು ಅವರು ವಿಚಾರಣೆಗೆ ಒಳಪಡಿಸಲಿದ್ದಾರೆ. ಮೇಲಾಗಿ ಸ್ಥಳದಲ್ಲೇ ನೀಡಬಹುದಾದ ಅರ್ಜಿಗಳ ವಿಚಾರಣೆಯೂ ನಡೆಯಲಿದೆ.

ಬುಧವಾರ ವಿಚಾರಣೆಗೆ ಬರಲಿರುವ ಅರ್ಜಿಗಳ ಪೈಕಿ ಸಮಸ್ತ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸುವ ಅರ್ಜಿಯೂ ಸೇರಿದೆ. ಬೈಲಹೊಂಗಲದ ಬಿ.ಎಂ.ಚಿನ್ನಗೌಡರ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ದೇಶದಲ್ಲಿ ಅಂತರ ಜಾತಿ ವಿವಾಹವಾದವರಿಗೆ ಎಲ್ಲ ರಂಗದಲ್ಲೂ ಶೇ 15ರಷ್ಟು ಮೀಸಲಾತಿ ನೀಡಬೇಕೆಂದು ಬೆಂಗಳೂರಿನ ಡಾ.ಕೆ.ಮುರುಳಿ ಎಂಬುವವರು ಆಗ್ರಹಿಸಿದ್ದು, ಅದು ಸಹ ವಿಚಾರಣೆಗೆ ಬರಲಿದೆ.

ಆರ್ಯವೈಶ್ಯ ಜನಾಂಗದ ಹೆಸರನ್ನು ಮೀಸಲಾತಿ ಅಂಕಣದಲ್ಲಿ ಸೇರಿಸಬೇಕು, ಕುರುಶಿನಶೆಟ್ಟಿ ಜಾತಿಯ ಹೆಸರನ್ನು ಕುರುಹಿನಶೆಟ್ಟಿ ಎಂದು ತಿದ್ದುಪಡಿ ಮಾಡಬೇಕು, ಗೋಸಾವಿ ಸಮಾಜದ ಎಲ್ಲಾ ಜಾತಿಗಳನ್ನು ಒಂದುಗೂಡಿಸಿ ಎಸ್‌ಸಿ, ಎಸ್‌ಟಿಗೆ ಸೇರಿಸಬೇಕು, ಯಾದವ (ಗೊಲ್ಲ) ಸಮುದಾಯಕ್ಕೆ ವಿಶೇಷ ಆದ್ಯತೆ ನೀಡಿ ಎಸ್‌ಟಿಗೆ, ಅಗ್ನಿವಂಶ ಕ್ಷತ್ರಿಯ (ತಿಗಳ) ಸಮುದಾಯವನ್ನು ಪ್ರವರ್ಗ 2ಎ ದಿಂದ ಪ್ರವರ್ಗ 1ಕ್ಕೆ ಸೇರ್ಪಡೆ, ಉಪ್ಪಾರ, ಅಗಸ, ಬಾರಿಕರ, ಸೇವಾರ ಕ್ಷೌರಿಕ ಜಾತಿಗಳನ್ನು ಎಸ್‌ಸಿಗೆ ಸೇರಿಸಬೇಕು, ಕು, ನಾಮಧಾರಿ ಗೌಡ ಜಾತಿಯನ್ನು ಪ್ರವರ್ಗ 2ಗೆ, ಸಿಖ್‌ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ, ಹಡಪದ/ಕ್ಷೌರಿಕ ಸಮಾಜದ ಬೇಡಿ
ಕೆಗಳನ್ನು ಈಡೇರಿಸಬೇಕು ಮೊದಲಾದ ಅರ್ಜಿಗಳು ವಿಚಾರಣೆಗೆ ಬರಲಿವೆ.

ಎನ್‌.ಪಿ.ಧರ್ಮರಾಜ್‌, ಕೆ.ಎನ್‌.ನಿಂಗಪ್ಪ, ಶರಣಪ್ಪ ಡಿ.ಮಣೆಗಾರ್‌, ಜಿ.ಡಿ.ಗೋಪಾಲ್‌ ಅವರನ್ನು ಸದಸ್ಯರಾಗಿ ಒಳಗೊಂಡ ಆಯೋಗ ಎಲ್ಲ ಅಹವಾಲುಗಳ ಬಗ್ಗೆ ಪರಿಶೀಲಿಸಿ, ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಕಳೆದ ವರ್ಷ ಆಯೋಗಬಹುತೇಕ ಎಲ್ಲ ಜಿಲ್ಲೆಗಳಿಗೆ ತೆರಳಿ ಅಹವಾಲು ಆಲಿಸಿತ್ತು. ಅಲ್ಲಿ ಸಲ್ಲಿಕೆಯಾಗದೆ ಉಳಿದ ಅರ್ಜಿಗಳನ್ನು ಇದೀಗ ವಿಚಾರಣೆ ನಡೆಸಲಾಗುತ್ತಿದೆ.

ಈಗಲೂ ಅರ್ಜಿ ಸಲ್ಲಿಸಬಹುದು

ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬೇಡಿಕೆ ಸಲ್ಲಿಸುವುದಾದರೆ, ಈಗಾಗಲೇ ಸೇರ್ಪಡೆಯಾಗಿರುವ ಪಟ್ಟಿಯಲ್ಲಿ ತಿದ್ದುಪಡಿ ಮಾಡುವುದಿದ್ದರೆ ಮಂಗಳವಾರ ಮತ್ತು ಬುಧವಾರ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯೊಳಗೆ ವಸಂತನಗರದ ದೇವರಾಜ ಅರಸು ಭವನಕ್ಕೆ ಬಂದು ಸೂಕ್ತ ದಾಖಲೆಗಳೊಂದಿಗ ಅರ್ಜಿ ಸಲ್ಲಿಸಬಹುದು. ಆಯೋಗವು ಸ್ಥಳದಲ್ಲೇ ವಿಚಾರಣೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.