ADVERTISEMENT

ಟೆಂಡರ್ ಕರೆಯದೆಯೇ ಕೆಆರ್‌ಐಡಿಎಲ್‌ಗೆ ಗುತ್ತಿಗೆ: ಆಕ್ಷೇಪ

ಮಾಗಡಿಯಲ್ಲಿ ಶಿವಕುಮಾರ ಶ್ರೀಗಳ ನೆನಪಿನಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 19:31 IST
Last Updated 19 ಜೂನ್ 2021, 19:31 IST
ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿ ಶ್ರೀ ಶಿವಕುಮಾರ ಶ್ರೀಗಳ ನೆನಪಿಗಾಗಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ನಿರ್ಮಾಣವಾಗಲಿರುವ ಸ್ಥಳ
ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿ ಶ್ರೀ ಶಿವಕುಮಾರ ಶ್ರೀಗಳ ನೆನಪಿಗಾಗಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ನಿರ್ಮಾಣವಾಗಲಿರುವ ಸ್ಥಳ   

ಬೆಂಗಳೂರು: ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರಾದ ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿ ಶ್ರೀಗಳ ನೆನಪಿಗಾಗಿ ₹25 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿಯನ್ನು ಟೆಂಡರ್‌ ಕರೆಯದೆಯೇ ನೇರವಾಗಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಮೂಲಕ ನಿರ್ವಹಿಸುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದ ಈ ನಡೆಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್‌ 4 (ಜಿ) ಅಡಿ ನೇರವಾಗಿ ಕೆಆರ್‌ಐಡಿಎಲ್‌ಗೆ ಕಾಮಗಾರಿ ಹೊಣೆ ನೀಡಲಾಗಿದೆ. ಕಾಯ್ದೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿ ಅನ್ವಯ, ₹2 ಕೋಟಿಯವರೆಗಿನ ಕಾಮಗಾರಿಯನ್ನು ಟೆಂಡರ್‌ ನೀಡದೆ ಕೊಡಬಹುದಾಗಿದೆ. ಆದರೆ, ಇದಕ್ಕಿಂತ ಸುಮಾರು 12 ಪಟ್ಟು ಹೆಚ್ಚು ಮೊತ್ತದ ಕಾಮಗಾರಿಯನ್ನು ನೀಡಿರುವುದು ಸರಿಯಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಆರ್. ಅನಿಲ್‌ಕುಮಾರ್‌ ದೂರಿದರು.

ADVERTISEMENT

‘ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್‌ ಅಡಿ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಅಧಿಕೃತವಾಗಿ ಕಾಮಗಾರಿ ಆರಂಭಿಸಿರುವುದು ಶುಕ್ರವಾರ (ಜೂನ್ 18). ಆದರೆ, ಈಗಾಗಲೇ ಕಟ್ಟಡಕ್ಕೆ ಅಡಿಪಾಯ ಹಾಕಲಾಗಿದೆ ಎಂದು ಕೆಆರ್‌ಐಡಿಎಲ್‌ ಅಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಕಾವಲುಗಾರರು ಇರುವುದಕ್ಕೆ ಒಂದು ಕೋಣೆ ನಿರ್ಮಿಸಿರುವುದು ಬಿಟ್ಟರೆ ಯಾವುದೇ ಕಾಮಗಾರಿಯೂ ಆಗ ಪ್ರಾರಂಭವಾಗಿರಲಿಲ್ಲ’ ಎಂದೂ ಅವರು ಹೇಳಿದರು.

‘ರಾಜ್ಯ ಸರ್ಕಾರದ ಅಡಿಯಲ್ಲಿ 35ಕ್ಕೂ ಹೆಚ್ಚು ನಿಗಮ, ಮಂಡಳಿಗಳು ಇವೆ. ಇವುಗಳಿಗೆಲ್ಲ ಹೀಗೆ ಟೆಂಡರ್‌ ಕರೆಯದೆ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಯ ಗುತ್ತಿಗೆ ನೀಡಿದರೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗುವುದಿಲ್ಲವೇ’ ಎಂದೂ ಅವರು ಪ್ರಶ್ನಿಸಿದರು.

‘ಸಿ.ಟಿ. ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ರೈಟ್ಸ್‌ ಸಂಸ್ಥೆಗೆ ಈ ಕಾಮಗಾರಿಯನ್ನು ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಇದ್ದಕ್ಕಿದ್ದಂತೆ ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಿರುವುದು ಅಚ್ಚರಿ ತಂದಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಗುತ್ತಿಗೆದಾರರೊಬ್ಬರು ಹೇಳಿದರು.

‘ತುರ್ತು ಸಂದರ್ಭಗಳಲ್ಲಿ ಈ ರೀತಿ 4ಜಿ ವಿನಾಯಿತಿ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಆದರೆ, ಅಂತಹ ಯಾವುದೇ ತುರ್ತು ಇಲ್ಲದಿದ್ದಾಗ ಹೀಗೆ ಟೆಂಡರ್‌ ಕರೆಯದೆ ಗುತ್ತಿಗೆ ನೀಡಿದ್ದು ತಪ್ಪು. ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸಿರುವುದರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಯಾವುದೇ ಗುತ್ತಿಗೆ ನೀಡುವಾಗ ಟೆಂಡರ್‌ ಆಹ್ವಾನಿಸಿಯೇ ನೀಡಬೇಕು ಎಂಬುದು ನಮ್ಮ ವಾದ’ ಎಂದು ಅವರು ಹೇಳಿದರು.

‘ಶಿವಕುಮಾರ ಶ್ರೀಗಳಂತಹ ಮೇರು ವ್ಯಕ್ತಿತ್ವದ ನೆನಪಿಗಾಗಿ ಕಟ್ಟುತ್ತಿರುವ ಈ ಕೇಂದ್ರದ ಕಾಮಗಾರಿಯಾದರೂ ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶ ನಮ್ಮದು’ ಎಂದೂ ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ. ರುದ್ರೇಶ್‌ ಅವರಿಗೆ ಹಲವು ಬಾರಿ ಕರೆ ಮಾಡಲಾಯಿತು. ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.