ADVERTISEMENT

ಮೇಯರ್ ಅವಧಿ ವಿಸ್ತರಣೆಗೆ ಆಕ್ಷೇಪ

2 ವರ್ಷಕ್ಕೆ ಸೀಮಿತಗೊಳಿಸಲು ಪಾಲಿಕೆಯ ಮಾಜಿ ಸದಸ್ಯರು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 18:31 IST
Last Updated 5 ನವೆಂಬರ್ 2020, 18:31 IST
   

ಬೆಂಗಳೂರು: ಮೇಯರ್ ಅಧಿಕಾರದ ಅವಧಿಯನ್ನು 5 ವರ್ಷ ಗಳಿಗೆ ಏರಿಕೆ ಮಾಡಬೇಕೆಂಬ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ-2020 ಮಸೂದೆಯ ಪ್ರಸ್ತಾವಕ್ಕೆ ಪಾಲಿಕೆಯ ಮಾಜಿ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಅದೇ ರೀತಿ, ಚುನಾವಣೆ
ಯ ಮೂಲಕ ಮೇಯರ್‌ ಆಯ್ಕೆ ಮಾಡುವ ಬದಲು, ಸದ್ಯ ಇರುವ ವಿಧಾನವನ್ನೇ ಪಾಲಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಜನಾಗ್ರಹ‘ ಸಂಘಟನೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಿಟಿ ಪಾಲಿಟಿಕ್ಸ್ ವೆಬಿನಾರ್‌ನಲ್ಲಿ ವಿವಿಧ ಪಕ್ಷಗಳ ಪಾಲಿಕೆಯ ಮಾಜಿ ಸದಸ್ಯರು ಹಾಗೂ ಮುಖಂಡರು ಮಾತನಾಡಿದರು.

‘ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡಲಿ’

ADVERTISEMENT

‘1.03 ಕೋಟಿ ಜನಸಂಖ್ಯೆ ಇರುವ ನಗರಕ್ಕೆ ಹೊಸ ಕಾಯ್ದೆ ತರುತ್ತಿರುವುದು ಸ್ವಾಗತಾರ್ಹ. ಮಸೂದೆಯ ಸಾಧಕ–ಬಾಧಕಗಳ ಬಗ್ಗೆ ಹೆಚ್ಚಿನ ಚರ್ಚೆ
ಗಳು ನಡೆಯಬೇಕಿದೆ. ವಲಯ ಸಮಿತಿಗಳಲ್ಲಿ ಅಧಿಕಾರಿಗಳ ಬದಲು ಚುನಾಯಿತ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ನೀಡಬೇಕು. ಮೇಯರ್‌ ಜತೆಗೆ ಪಾಲಿಕೆ ಸದಸ್ಯರಿಗೆ ಕೂಡ ಹೆಚ್ಚಿನ ಅಧಿಕಾರ ಇರಬೇಕು. ಮೇಯರ್‌ಗೆ ಮಾತ್ರ ಹೆಚ್ಚಿನ ಅಧಿಕಾರ ನೀಡಿದಲ್ಲಿ ಕೌನ್ಸಿಲ್ ಸಭೆ ಮಹತ್ವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮೇಯರ್ ಅಧಿಕಾರದ ಅವಧಿಯನ್ನು 2 ವರ್ಷಕ್ಕೆ ಹೆಚ್ಚಿಸುವುದು ಉತ್ತಮ. ಚುನಾವಣೆ ಮೂಲಕ ಮೇಯರ್ ಆಯ್ಕೆ ಸರಿಯಾದ ಕ್ರಮವಲ್ಲ’.

- ಪದ್ಮನಾಭ ರೆಡ್ಡಿ, ಪಾಲಿಕೆಯ ಮಾಜಿ ಸದಸ್ಯ (ಬಿಜೆಪಿ)

***

‘ಚುನಾವಣೆ ಮುಂದೂಡುವ ತಂತ್ರ’

‘ನಗರಕ್ಕೆ ಅಗತ್ಯವಾಗಿ ಪ್ರತ್ಯೇಕವಾದ ಕಾಯ್ದೆ ಬೇಕು. ಆದರೆ, ಅದನ್ನು ಸರಿಯಾದ ಸಮಯದಲ್ಲಿ ಪರಿಚಯಿಸುತ್ತಿಲ್ಲ. ಮಸೂದೆ ಮಂಡಿಸಿ ಚುನಾವಣೆ ಮುಂದೂಡಲು ಷಡ್ಯಂತ್ರ ನಡೆಸಲಾಗಿದೆ. ಈ ಮಸೂದೆಯ ಬಗ್ಗೆ ಸರ್ಕಾರೇತರ ಸಂಸ್ಥೆಗಳು, ಪಾಲಿಕೆಯ ಮಾಜಿ ಸದಸ್ಯರು, ತಜ್ಞರು ಹಾಗೂ ಹಿರಿಯ ನಾಗರಿಕ ರ ಸಲಹೆಗಳನ್ನು ಪಡೆಯಬೇಕಿದೆ. ಸಮಗ್ರ ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ಕಾಯ್ದೆಯು ದೂರದೃಷ್ಟಿ ಹೊಂದಿರ ಬೇಕು. ಮೇಯರ್ ಅಧಿಕಾರದ ಅವಧಿಯನ್ನು 5ವರ್ಷಕ್ಕೆ ವಿಸ್ತರಿಸುವುದು ಸರಿಯಲ್ಲ. ಬೆಸ್ಕಾಂ, ಜಲಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳು ಒಟ್ಟಾಗಿ ಸಾಗುವ ವ್ಯವಸ್ಥೆ ರೂಪಿಸಬೇಕು. ಪಾಲಿಕೆ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡಬೇಕು’.

ಅಬ್ದುಲ್ ವಾಜಿದ್, ಪಾಲಿಕೆ ಮಾಜಿ ಸದಸ್ಯ (ಕಾಂಗ್ರೆಸ್)

***

‘ಸಾರ್ವಜನಿಕ ಚರ್ಚೆ ನಡೆಯಬೇಕು’

‘ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದಲೇ ಈ ಸಂದರ್ಭದಲ್ಲಿ ಮಸೂದೆಯನ್ನು ತರಲಾಗಿದೆ. ಈ ಹಿಂದೆಯೇ ಅಥವಾ ಚುನಾವಣೆ ಮುಗಿದ ಬಳಿಕ ಮಸೂದೆಯನ್ನು ಪರಿಚಯಿಸಬಹುದಾಗಿತ್ತು. ಈ ಸಂದರ್ಭದಲ್ಲಿ ತರುತ್ತಿರುವುದು ಸರಿಯಾದ ಕ್ರಮವಲ್ಲ. ಇದರಲ್ಲಿ ಕಾಮಗಾರಿಗಳನ್ನು ಯಾವ ರೀತಿ ಕೈಗೊಳ್ಳಬೇಕು ಎಂಬ ಸ್ಪಷ್ಟನೆಯಿಲ್ಲ. ಹಾಗಾಗಿ ಇದರ ಬಗ್ಗೆ ವಿವಿಧ ಹಂದರಗಳಲ್ಲಿ ಚರ್ಚೆಗಳು ನಡೆಯಬೇಕಿದೆ. ನಗರಕ್ಕೆ ಪ್ರತ್ಯೇಕ ಕಾಯ್ದೆಯ ಅಗತ್ಯವಿದ್ದು, ಅದು ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು. ಬಿಬಿಎಂಪಿಯಲ್ಲಿ ಹಣ ಪೋಲು ಆಗುವುದನ್ನು ಕೂಡ ತಡೆಯಬೇಕಿದೆ’.

- ಆರ್. ಪ್ರಕಾಶ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ

***

‘ಎಲ್ಲ ನಗರಗಳಿಗೂ ಅನ್ವಯ ಆಗಬೇಕು’

‘ಕಾಯ್ದೆಯನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ಎಲ್ಲ ನಗರಗಳಿಗೂ ನೂತನ ಕಾಯ್ದೆ ಅನ್ವಯವಾಗಬೇಕು. ಸಂವಿಧಾನದಲ್ಲಿ ಉತ್ತಮವಾಗಿ ಆಡಳಿತ ನಡೆಸಲು ಎಲ್ಲ ಅವಕಾಶಗಳೂ ಇವೆ. ಹಾಗಾಗಿ ಪ್ರತ್ಯೇಕ ಕಾಯ್ದೆಯ ಅಗತ್ಯ ಇರಲಿಲ್ಲ. ರಾಜ್ಯ ಸರ್ಕಾರವು ಕೋವಿಡ್‌ ನಿರ್ವಹಣೆಯಲ್ಲಿ ವಿಫಲವಾಗಿದೆ. ಇನ್ನೊಂದೆಡೆ,ಆರ್ಥಿಕ ವ್ಯವಸ್ಥೆ ಕುಸಿಯು
ತ್ತಿದೆ. ಈ ಕಾರಣಕ್ಕೆ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಮೇಯರ್‌ಗೆ ಸರಿಯಾದ ಅಧಿಕಾರ ಇಲ್ಲದಿದ್ದಲ್ಲಿ ಅಧಿಕಾರದ ಅವಧಿ ಹೆಚ್ಚಳ ನಿರರ್ಥಕವಾಗಲಿದೆ’.

- ಎಂ.ಎಸ್. ಶಾಂತಲಾ ದಾಮ್ಲೆ, ಆಮ್‌ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ

***

‘ಮೇಯರ್‌ಗೆ 5 ವರ್ಷ ಅಧಿಕಾರದ ಅವಧಿ ಅಗತ್ಯ’

‘ಮೇಯರ್ ಅಧಿಕಾರದ ಅವಧಿ ಬಗ್ಗೆ ಪ್ರಶ್ನೆಗಳು ಉದ್ಭವಿಸಿದೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿಯ ಅಧಿಕಾರದ ಅವಧಿ
ಯನ್ನು ಒಂದು ವರ್ಷಕ್ಕೆ ಇಳಿಕೆ ಮಾಡಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೇಯರ್ ಅಧಿಕಾರದ ಅವಧಿ ಒಂದು ವರ್ಷ ಇರುವ ಕಾರಣಕಕೆ ಬೆಂಗಳೂರು ನಗರ ಇಂತಹ ಹೀನಾಯ ಸ್ಥಿತಿಯನ್ನು ತಲುಪಿದೆ. ಮೇಯರ್ ಅಧಿಕಾರದ ಅವಧಿ ಯನ್ನು 5 ವರ್ಷಕ್ಕೆ ಹೆಚ್ಚಳ ಮಾಡಬೇಕಿದೆ. ಪಾಲಿಕೆ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡಬೇಕಿದೆ’.

- ಶ್ರೀಕಾಂತ ನರಸಿಂಹನ್, ಬೆಂಗಳೂರು ನವ ನಿರ್ಮಾಣ ಪಕ್ಷದ ಪ್ರಧಾನ ಕಾರ್ಯದರ್ಶಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.