ADVERTISEMENT

ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ಸುಲಿಗೆ: ಆಮ್‌ ಆದ್ಮಿ ಪಕ್ಷದ ಆರೋಪ

ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 20:05 IST
Last Updated 12 ಫೆಬ್ರುವರಿ 2021, 20:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ರಸ್ತೆ ಬದಿ ವಾಹನ ಪಾರ್ಕಿಂಗ್‌ಗೆ ದುಬಾರಿ ಶುಲ್ಕ ವಿಧಿಸಲು ಹೊರಟಿರುವ ಬಿಬಿಎಂಪಿಯ ಕ್ರಮ ಅವೈಜ್ಞಾನಿಕ. ಅಗತ್ಯ ಮೂಲಸೌಕರ್ಯ ಒದಗಿಸುವ ಬದಲು ಪಾಲಿಕೆಯು ಸುಲಿಗೆ ಮಾಡಲು ನಿಂತಿದೆ’ ಎಂದುಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನ ಗಳನ್ನು ಪಾರ್ಕಿಂಗ್‌ ಮಾಡುತ್ತಿರುವುದು ವಾಸ್ತವ. ಆದರೆ, ಈ ಸಮಸ್ಯೆಗೆ ಬಿಬಿಎಂಪಿಯ ವೈಫಲ್ಯವೇ ಕಾರಣ. ರಸ್ತೆ ಬದಿಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುವ ತನಕ ಕಣ್ಣು ಮುಚ್ಚಿಕೊಂಡಿದ್ದ ಕಾರಣ ಈ ಸಮಸ್ಯೆ ಸಂಕೀರ್ಣ ಸ್ವರೂಪ ಪಡೆದುಕೊಂಡಿದೆ. ಬಹುಮಹಡಿ ಕಟ್ಟಡಗಳ ನೆಲ ಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎನ್ನುವ ನಿಯಮವಿದೆ. ಆದರೆ, ಈ ನಿಯಮಗಳು ಬಹುತೇಕ ಕಟ್ಟಡಗಳಲ್ಲಿ ಉಲ್ಲಂಘನೆಯಾಗುತ್ತಿದ್ದು, ನೆಲ ಮಹಡಿಯನ್ನೂ ಬಾಡಿಗೆಗೆ ನೀಡಲಾಗುತ್ತಿದೆ. ಅಂತಹ ಕಟ್ಟಡ ಮಾಲೀಕರ ವಿರುದ್ಧ ಬಿಬಿಎಂಪಿ ಇದುವರೆಗೂ ಕ್ರಮ ತೆಗೆದುಕೊಂಡ ಉದಾಹರಣೆಗಳಿಲ್ಲ’ ಎಂದು ತಿಳಿಸಿದರು.

‘ಶುಲ್ಕ ಪಾವತಿ ಪಾರ್ಕಿಂಗ್‌ನಿಂದ ರಸ್ತೆಗಳ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎನ್ನುವುದರಲ್ಲಿ ಹುರುಳಿಲ್ಲ. ಇದು ಜನರನ್ನು ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುವ ತಂತ್ರ. ಸಮಸ್ಯೆಯನ್ನು ನಿಜವಾಗಿ ಬಗೆಹರಿಸುವ ಯಾವುದೇ ಆಲೋಚನೆ ಬಿಬಿಎಂಪಿಗೆ ಇಲ್ಲ. ಸರಕು ಸಾಗಣೆ ಲಾರಿಗಳು ಸೇರಿದಂತೆ ಇತರೇ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ವಾಹನಗಳಿಂದ ರಸ್ತೆಗಳ ಮೇಲೆ ಹೆಚ್ಚು ಹೊರೆಯಾಗುತ್ತಿದೆ. ಇಂತಹ ವಾಹನಗಳ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ಗುರುತಿಸದ ಹೊರತು ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದಿಲ್ಲ. ಈ ಕೂಡಲೇ ತನ್ನ ಅವೈಜ್ಞಾನಿಕ ನಿರ್ಧಾರದಿಂದ ಬಿಬಿಎಂಪಿ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.