ಬೆಂಗಳೂರು: ಬೇಕಾದ ಮಾರ್ಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಆ್ಯಪ್ ಆಧಾರಿತ ಪಾವತಿ ಮೂಲಕ ಲಂಚ ಪಡೆದ ಕೆಎಸ್‌ಆರ್‌ಟಿಸಿಯ ಇಬ್ಬರು ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ಸಿಬ್ಬಂದಿ ದೂರು ನೀಡಿದ್ದಾರೆ.
ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ 1ರಲ್ಲಿ ಸಹಾಯಕ ಸಂಚಾರ ನಿರೀಕ್ಷಕಿಯಾಗಿರುವ (ಎಟಿಐ) ಸಂಗೀತಾ ಮತ್ತು ಸಹಾಯಕ ಸಂಚಾರ ಅಧೀಕ್ಷಕಿಯಾಗಿರುವ (ಎಟಿಎಸ್) ಸ್ವಪ್ನಾ ಅವರು ಚಾಲಕರು ಮತ್ತು ನಿರ್ವಾಹಕರಿಂದ ಲಂಚ ಪಡೆದಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಜಯದೇವ ಎಂ. ಅವರು ದೂರು ನೀಡಿ, ದಾಖಲೆಗಳನ್ನು ಸಲ್ಲಿಸಿದ್ದಾರೆ.
ಸಂಗೀತಾ ಅವರ ಖಾತೆಗೆ ಈ ವರ್ಷ ಫೆಬ್ರುವರಿ 27ರಂದು ₹50,000, ಜೂನ್ 26ರಂದು ₹1,100 ಪಾವತಿಯಾಗಿದೆ. ಸ್ವಪ್ನಾ ಅವರ ಖಾತೆಗೆ ಫೆಬ್ರುವರಿ 24 ಮತ್ತು ಮಾರ್ಚ್ 12ರಂದು ತಲಾ ₹5,000, ಮಾರ್ಚ್ 28, ಏಪ್ರಿಲ್ 4, 9, 24 ಮತ್ತು ಮೇ 11 ರಂದು ತಲಾ ₹1,000, ಮೇ 7ರಂದು ₹500 ಪಾವತಿಯಾಗಿದೆ.
ಬಸಣ್ಣ ಹುಡೇದ ಎಂಬ ಚಾಲಕರೊಬ್ಬರ ಖಾತೆಯಿಂದ ಈ ಇಬ್ಬರು ಅಧಿಕಾರಿಗಳಿಗೆ ಪಾವತಿಯಾಗಿದೆ. ಈ ಇಬ್ಬರು ಅಧಿಕಾರಿಗಳ ವಿರುದ್ಧ ಸರ್ಕಾರದ ನಿಯಮಾವಳಿ, ಲೋಕಾಯುಕ್ತ ಕಾಯ್ದೆ ಹಾಗೂ ಕೆಎಸ್‌ಆರ್‌ಟಿಸಿ ಶಿಸ್ತು ಪ್ರಾಧಿಕಾರದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
‘ಇಬ್ಬರು ಅಧಿಕಾರಿಗಳ ವಿರುದ್ಧ ದೂರು ಬಂದಿದೆ. ಆಂತರಿಕ ತನಿಖೆ ನಡೆಯುತ್ತಿದೆ’ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.