ಬೆಂಗಳೂರು: ನಗರದ ಹೆಬ್ಬಾಳ ಮೇಲ್ಸೇತುವೆ, ಡೌನ್ ರ‍್ಯಾಂಪ್ ಹಾಗೂ ನೃಪತುಂಗ ರಸ್ತೆಗೆ ಹೊಂದಿಕೊಂಡಿರುವ ಕಾರ್ಪೋರೇಷನ್ ವೃತ್ತದಲ್ಲಿ ತೈಲ ಸೋರಿಕೆಯಾಗಿದ್ದರಿಂದ ಶನಿವಾರ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ತೈಲ ಸಾಗಣೆ ಟ್ಯಾಂಕರ್‌ವೊಂದು ಮಧ್ಯಾಹ್ನ ಮೇಲ್ಸೇತುವೆಯಲ್ಲಿ ಹೊರಟಿತ್ತು. ಇದೇ ಟ್ಯಾಂಕರ್‌ನಿಂದ ತೈಲ ಸೋರಿಕೆಯಾಗುತ್ತಿತ್ತು. ಇದನ್ನು ಗಮನಿಸದ ಚಾಲಕ, ಟ್ಯಾಂಕರ್ ಚಲಾಯಿಸಿಕೊಂಡು ಡೌನ್ ರ‍್ಯಾಂಪ್‌ನಲ್ಲಿ ಮುಂದಕ್ಕೆ ಸಾಗಿ ರಸ್ತೆಯಲ್ಲಿ ಹೊರಟಿದ್ದರು.
ಇದರಿಂದಾಗಿ ಮೇಲ್ಸೇತುವೆ, ಡೌನ್ ರ‍್ಯಾಂಪ್ ಹಾಗೂ ನಾಗವಾರ– ಬಿಇಎಲ್ ವೃತ್ತದ ರಸ್ತೆಯಲ್ಲಿ ತೈಲ ಚೆಲ್ಲಿತ್ತು. ಇದೇ ಮಾರ್ಗವಾಗಿ ಅತೀ ವೇಗದಲ್ಲಿ ಹೊರಟಿದ್ದ ಸವಾರರು, ದ್ವಿಚಕ್ರ ವಾಹನಗಳ ಸಮೇತ ರಸ್ತೆಯಲ್ಲಿ ಉರುಳಿಬಿದ್ದರು. ಅದನ್ನು ನೋಡಿದ ಉಳಿದ ಸವಾರರು, ದ್ವಿಚಕ್ರ ವಾಹನಗಳನ್ನು ನಿಧಾನಗತಿಯಲ್ಲಿ ಚಲಾಯಿಸಿಕೊಂಡು ಮುಂದಕ್ಕೆ ಹೋದರು.
ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ತೈಲ ಚೆಲ್ಲಿದ್ದ ರಸ್ತೆಯಲ್ಲಿ ಮಣ್ಣು ಎರಚಿದರು. ನಂತರ, ಸಾರ್ವಜನಿಕರ ವಾಹನಗಳು ನಿಧಾನಗತಿಯಲ್ಲಿ ಮುಂದಕ್ಕೆ ಸಾಗಿದವು. ಇದರಿಂದಾಗಿ ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಯಿತು.
ಬಳ್ಳಾರಿ ರಸ್ತೆಯ ಅರಮನೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವಿತ್ತು. ಇದಕ್ಕೂ ಮುನ್ನವೇ ರಸ್ತೆಯಲ್ಲಿ ತೈಲ ಸೋರಿಕೆಯಾಗಿತ್ತು. ಸಂಚಾರ ಪೊಲೀಸರು, ತ್ವರಿತವಾಗಿ ಕ್ರಮ ಕೈಗೊಂಡು ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಪೊಲೀಸರು, ರಸ್ತೆಗೆ ಮಣ್ಣು ಹಾಕಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.