ADVERTISEMENT

ಚಕ್ರ ಪಂಕ್ಚರ್ ಮಾಡಿ ಕಳ್ಳತನ: ‘ಓಜಿಕುಪ್ಪಂ’ ಗ್ಯಾಂಗ್‌ನ ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:14 IST
Last Updated 6 ಮೇ 2022, 16:14 IST
ಆರೋಪಿಗಳಿಂದ ಜಪ್ತಿ ಮಾಡಲಾದ ನಗದು ಹಾಗೂ ದ್ವಿಚಕ್ರ ವಾಹನಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ನಗದು ಹಾಗೂ ದ್ವಿಚಕ್ರ ವಾಹನಗಳು   

ಬೆಂಗಳೂರು: ಉಪ ನೋಂದಣಾಧಿಕಾರಿ ಕಚೇರಿ ಹಾಗೂ ಬ್ಯಾಂಕ್‌ಗಳ ಬಳಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡುತ್ತಿದ್ದ ‘ಓಜಿಕುಪ್ಪಂ’ ಗ್ಯಾಂಗ್‌ನ ಇಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಚನ್ನೈನ ಕಾರ್ತಿಕ್ ಹಾಗೂ ಗೋಪಿ ಬಂಧಿತರು. ಇವರಿಂದ ₹5.65 ಲಕ್ಷ ನಗದು ಹಾಗೂ 2 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆಗಾಗ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಇಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಕೆಲದಿನ ವಾಸವಿರುತ್ತಿದ್ದರು. ಹಲವೆಡೆ ಹಣ ಕದ್ದುಕೊಂಡು, ನಂತರ ತಮ್ಮೂರಿಗೆ ಹೋಗುತ್ತಿದ್ದರು’ ಎಂದೂ ತಿಳಿಸಿದರು.

ADVERTISEMENT

ಚಕ್ರ ಪಂಕ್ಚರ್ ಮಾಡಿ ಕೃತ್ಯ: ‘ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜಯರಾಮ್, ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಿದ್ದರು. ಸಮೀಪದಲ್ಲೇ ಕಾರು ನಿಲ್ಲಿಸಿದ್ದರು. ಕಾರಿನ ಚಕ್ರವನ್ನು ಆರೋಪಿಗಳು ಪಂಕ್ಚರ್ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಜಾಗವೊಂದರ ವ್ಯವಹಾರ ಮುಗಿಸಿ ಹಣ ಪಡೆದುಕೊಂಡು ಕಚೇರಿಯಿಂದ ಹೊರಗೆ ಬಂದಿದ್ದ ಜಯರಾಮ್, ಕಾರಿನಲ್ಲಿ ಮನೆಯತ್ತ ಹೊರಡಲು ಸಜ್ಜಾಗಿದ್ದರು. ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಕಾರಿನ ಚಕ್ರ ಪಂಕ್ಚರ್ ಆಗಿರುವುದಾಗಿ ಹೇಳಿದ್ದರು. ಕಾರಿನಿಂದ ಇಳಿದು ಚಕ್ರ ಗಮನಿಸಿದ್ದ ಜಯರಾಮ್, ಪಂಕ್ಚರ್‌ ತಿದ್ದಿಸಲು ಸಮೀಪದಲ್ಲೇ ಇದ್ದ ಅಂಗಡಿಗೆ ಹೋಗಿದ್ದರು. ಅದೇ ವೇಳೆ ಗಮನ ಬೇರೆಡೆ ಸೆಳೆದಿದ್ದ ಆರೋಪಿಗಳು, ಕಾರಿನಲ್ಲಿದ್ದ ಹಣ ಕದ್ದುಕೊಂಡು ಪರಾರಿಯಾಗಿದ್ದರು’ ಎಂದೂ ತಿಳಿಸಿದರು.

ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ: ‘ಆರೋಪಿಗಳ ವಿಳಾಸ ಪತ್ತೆ ಮಾಡಿದ್ದ ಪೊಲೀಸರು, ಅವರನ್ನು ಪುರಾವೆ ಸಮೇತ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿಗಳ ಮನೆ ಬಳಿಯೇ ಸಾರ್ವಜನಿಕರ ಸೋಗಿನಲ್ಲಿ ಪೊಲೀಸರು ಬಾಡಿಗೆಗೆ ಇದ್ದರು. ನಿತ್ಯವೂ ಆರೋಪಿಗಳನ್ನು ಹಿಂಬಾಲಿಸಿ, ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘7 ಕಡೆಗಳಲ್ಲಿ ಆರೋಪಿಗಳು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಇವರಿಬ್ಬರ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.