ADVERTISEMENT

ನ್ಯಾಯಯುತ ಹಕ್ಕು ಕೇಳುತ್ತಿದ್ದೇವೆ: ನಿರ್ಮಲಾನಂದನಾಥ ಶ್ರೀ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 21:15 IST
Last Updated 13 ಮಾರ್ಚ್ 2021, 21:15 IST
ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಮಾತನಾಡಿದರು. ಇ.ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ರಮಣಾನಂದ ಶ್ರೀ, ನಂಜಾವಧೂತ ಶ್ರೀ, ಕುಮಾರ ಚಂದ್ರಶೇಖರ ಶ್ರೀ, ಸೌಮ್ಯನಾಥ ಶ್ರೀಗಳು ಇದ್ದಾರೆ.
ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಮಾತನಾಡಿದರು. ಇ.ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ರಮಣಾನಂದ ಶ್ರೀ, ನಂಜಾವಧೂತ ಶ್ರೀ, ಕುಮಾರ ಚಂದ್ರಶೇಖರ ಶ್ರೀ, ಸೌಮ್ಯನಾಥ ಶ್ರೀಗಳು ಇದ್ದಾರೆ.   

ನೆಲಮಂಗಲ: ‘ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರವನ್ನು ಸಕಾಲದಲ್ಲಿ ರಚಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಒಕ್ಕಲಿಗರು ತಮಗೆ ನ್ಯಾಯಯುತವಾಗಿ ಸಿಗಬೇಕಾಗಿದ್ದನ್ನು ಕೇಳುತ್ತಿದ್ದಾರೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಇಲ್ಲಿಗೆ ಸಮೀಪದ ನಗರೂರಿನ ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜಧಾನಿಯಲ್ಲಿ ಬಹುತೇಕ ಒಕ್ಕಲಿಗರು ತಮ್ಮ ಜಮೀನುಗಳನ್ನು ಕಳೆದುಕೊಂಡು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ’ ಎಂದರು.

‘ನಗರ ಪ್ರದೇಶದ ಬಡ ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು. ಉತ್ತರ ಕರ್ನಾಟಕದ ಭಾಗದ ಕುಡು ಒಕ್ಕಲಿಗರನ್ನು ಒಕ್ಕಲಿಗರ ಜಾತಿ ಪಟ್ಟಿಗೆ ಸೇರಿಸಬೇಕು. ಒಕ್ಕಲಿಗರಿಗೆ ಈಗಾಗಲೇ 3ಎ ಪ್ರವರ್ಗದಲ್ಲಿ ಶೇ 4 ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಒಕ್ಕಲಿಗರ ಸಮುದಾಯದಲ್ಲಿ 100ಕ್ಕೂ ಹೆಚ್ಚು ಒಳಪಂಗಡಗಳಿರುವುದರಿಂದ ಮೀಸಲಾತಿ ಪ್ರಮಾಣವನ್ನು ಶೇ 9ಕ್ಕೆ ಹೆಚ್ಚಿಸಬೇಕು’ ಎಂದರು.

ADVERTISEMENT

ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಶ್ರೀ ಮಾತನಾಡಿ, ‘ವೀರಶೈವ ಅಭಿವೃದ್ಧಿ ನಿಗಮ ಘೋಷಣೆಯಾಗುತ್ತಿದ್ದಂತೆ, ಶಾಸಕ ಎಸ್.ಎರ್. ವಿಶ್ವನಾಥ್ ಅವರು ಒಕ್ಕಲಿಗ ಸಮದಾಯಕ್ಕೂ ಪ್ರಾಧಿಕಾರ ಬೇಕು ಎಂದು ಧ್ವನಿ ಎತ್ತಿದ್ದರಿಂದ, ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರವಾಗಿ ಸ್ಪಂದಿಸಿದ್ದಾರೆ. ಅದರಂತೆಯೇ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆಯೂ ವಿಶ್ವನಾಥ್‌ ಕೋರಬೇಕು’ ಎಂದರು.

‘ಎಲ್ಲ ರೈತರ ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡಿರುವ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು’ ಎಂದು ಮನವಿ ಮಾಡಿದರು.

ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರ ಸ್ವಾಮೀಜಿ, ಶಾಸಕ ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಮಾತನಾಡಿದರು. ಶಿವಾನಂದ ಆಶ್ರಮದ ರಮಣಾನಂದ ಶ್ರೀ, ಮಂಗಳೂರು ಧರ್ಮಪಾಲನಾಥ ಶ್ರೀ, ಒಕ್ಕೂಟದ ಅಧ್ಯಕ್ಷ ನಾಗಣ್ಣ ಬಾಣಸವಾಡಿ, ಕೋಲಾರ ಲಕ್ಷ್ಮಣ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.