ಬೆಂಗಳೂರು: ಹೊಸದಾಗಿ ಜಾತಿವಾರು ಸಮೀಕ್ಷೆ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರಕ್ಕೆ ಎಲ್ಲಾ ಸಮುದಾಯಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು. ಸಂಘದ ವತಿಯಿಂದ ಪ‍್ರತ್ಯೇಕವಾಗಿ ಡಿಜಿಟಲ್ ಸರ್ವೆ ಮಾಡಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಹೇಳಿದರು.
ಎಚ್.ಕಾಂತರಾಜ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯ ವರದಿಯನ್ನು ಕೈಬಿಟ್ಟಿರುವುದು ಸರಿಯಾಗಿದೆ. ಹೊಸ ಸಮೀಕ್ಷೆಗೆ ಸಂಘದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಳೆಯ ವರದಿ ಪರಿಶೀಲಿಸಿ, ಸರಿಪಡಿಸುವಂತೆ ಹೇಳುವುದು ಸರಿಯಲ್ಲ. ಡಿಜಿಟಲ್ ಸೌಲಭ್ಯ ಬಳಸಿಕೊಂಡು ಹೊಸದಾಗಿ ಸಮೀಕ್ಷೆ ನಡೆಸಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮೀಕ್ಷೆ ನಡೆಸುವುದು ಸೂಕ್ತ. ಮೂರು ತಿಂಗಳಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಸ್ವಲ್ಪ ನಿಧಾನವಾದರೂ ನಿಖರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ವೀರಶೈವರು, ಒಕ್ಕಲಿಗರು, ಕುರುಬರು, ಬ್ರಾಹ್ಮಣರು ಸೇರಿ ಇತರೆ ಸಮುದಾಯಗಳು ಕಾಂತರಾಜ ವರದಿ ಬಗ್ಗೆ ಆಕ್ಷೇಪ ಎತ್ತಿದ್ದವು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿದರೂ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸೂಚನೆಯಂತೆ ಸಂಘದಿಂದ ಡಿಜಿಟಲ್ ಸರ್ವೆ ಮಾಡಿಸಲಾಗುವುದು. ಇದು ಯಾವುದೇ ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧವಿಲ್ಲ. ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಸಮೀಕ್ಷೆ ಮಾಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಂಘದ ಕಾರ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ ಮಾತನಾಡಿ, ಸಮೀಕ್ಷೆಗೆ ಪ್ರತಿ ಪಕ್ಷಗಳು ವಿರೋಧ ಮಾಡುವ ಬದಲು ಸಹಕಾರ ನೀಡಬೇಕು. ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಗ್ರಾಮಗಳಿವೆ. ಪ್ರತಿ ಹಳ್ಳಿಗೂ ಅಧಿಕಾರಿಯೊಬ್ಬರನ್ನು ನೇಮಿಸಿ ಸಮರ್ಪಕವಾಗಿ ಅಂಕಿ ಅಂಶ ಕ್ರೋಡೀಕರಿಸಿದರೆ ಸಮಗ್ರ ಮಾಹಿತಿ ಸಿಗುತ್ತದೆ. ಸಮೀಕ್ಷೆ ಬಳಿಕ ಆಕ್ಷೇಪಣೆ ಸಲ್ಲಿಕೆಗೂ ಅವಕಾಶ ನೀಡಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ, ಹೊಸದಾಗಿ ನಡೆಸುವ ಜಾತಿವಾರು ಸಮೀಕ್ಷೆಗೆ ಆಧಾರ್ ಲಿಂಕ್ ಮಾಡಬೇಕು. ಜಿಯೊ ಟ್ಯಾಗ್ ಮಾಡಿದರೆ ಆಯಾ ಕುಟುಂಬದ ಆರ್ಥಿಕತೆಯ ಮಾಹಿತಿ ಪಡೆಯಬಹುದು ಎಂದರು.
ಸಂಘದ ಉಪಾಧ್ಯಕ್ಷ ಎಲ್. ಶ್ರೀನಿವಾಸ್, ಗೌರವಾಧ್ಯಕ್ಷ ಎಲುವಳ್ಳಿ ರಮೇಶ್, ಪದಾಧಿಕಾರಿಗಳಾದ ಜೆ. ರಾಜು, ವೆಂಕಟರಾಮೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.