ADVERTISEMENT

ಗ್ರಂಥಸ್ವಾಮ್ಯ ಹಕ್ಕು ಉಲ್ಲಂಘನೆ ಆರೋಪ: ಓಲಾ ಕ್ಯಾಬ್‌ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 19:09 IST
Last Updated 1 ಫೆಬ್ರುವರಿ 2022, 19:09 IST

ಬೆಂಗಳೂರು:’ಗ್ರಂಥಸ್ವಾಮ್ಯ ಕಾಯ್ದೆ ಉಲ್ಲಂಘನೆ ಆರೋಪದಡಿ ಲಹರಿ ಆಡಿಯೊ ಸಂಸ್ಥೆ ನಮ್ಮ ಕಂಪನಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು‘ ಎಂದು ಕೋರಿ ಓಲಾ ಕ್ಯಾಬ್ (ಎನ್‌ಎಐ ಖಾಸಗಿ ಕಂಪನಿ) ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಕಂಪನಿ ಪ್ರತಿನಿಧಿ ಎ.ಎಂ.ಇಕ್ತಿಯಾರ್ ಉದ್ದೀನ್‌ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ’ದೂರು ಆಧರಿಸಿ ಎಫ್‌ಐರ್ ದಾಖಲು ಮಾಡಿರುವ ಪೊಲೀಸರ ಕ್ರಮ ಸರಿಯಾಗಿಯೇ ಇದೆ. ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ‘ ಎಂದು ವಿಲೇವಾರಿ ಮಾಡಿದೆ.

ಪ್ರಕರಣವೇನು?: ಓಲಾ ಕ್ಯಾಬ್‌ಗಳಲ್ಲಿ ಟಿವಿ ಮತ್ತು ಡಿಸ್‌ಪ್ಲೇ ಸೆಟ್‌ಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಜನಪ್ರಿಯ ಚಿತ್ರಗೀತೆಗಳ ವಿಡಿಯೊ ಮತ್ತು ಆಡಿಯೊ ಪ್ರಸಾರ ಮಾಡಲಾಗಿತ್ತು.

ADVERTISEMENT

’ಓಲಾ ಕಂಪನಿ ನಮ್ಮ ಅನುಮತಿ ಪಡೆಯದೆ, ನಮ್ಮ ಗ್ರಂಥಸ್ವಾಮ್ಯದ ಹಾಡುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದೆ.ಇದು ಗ್ರಂಥಸ್ವಾಮ್ಯ ಕಾಯ್ದೆ–1957ರ ಉಲ್ಲಂಘನೆ’ ಎಂದು ಆರೋಪಿಸಿ ಲಹರಿ ರೆಕಾರ್ಡಿಂಗ್ ಕಂಪನಿ 2017ರ ಮೇ 13ರಂದು ಪೊಲೀಸರಿಗೆ ದೂರು ನೀಡಿತ್ತು. ಇದರನ್ವಯ ಹೆಚ್ಚುವರಿ ಪೊಲೀಸ್ ಆಯುಕ್ತರು ಎಫ್‌ಐಆರ್ ದಾಖಲಿಸಿ ತನಿಖೆಗೆ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಓಲಾ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.