ADVERTISEMENT

‘ನಿನ್ನನ್ನೇ ಎತ್ತಾಕೊಂಡು ಹೋಗ್ತೀನಿ’: ಓಲಾ ಕ್ಯಾಬ್‌ ಚಾಲಕನಿಂದ ಯುವತಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:55 IST
Last Updated 18 ಅಕ್ಟೋಬರ್ 2019, 19:55 IST
   

ಬೆಂಗಳೂರು: ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ದೆಹಲಿಯ ಯುವತಿ ಜೊತೆ ಓಲಾ ಕ್ಯಾಬ್‌ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಆ ಬಗ್ಗೆ ಯುವತಿಯೇ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.

‘ತೊಂದರೆಗೆ ಸಿಲುಕಿದ್ದಾಗ ಓಲಾ ಕಂಪನಿ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ’ ಎಂದೂ ಯುವತಿ ಆರೋಪಿಸಿದ್ದಾರೆ.

‘ಪೀಣ್ಯದಲ್ಲಿ ನೆಲೆಸಿರುವ ನಾನು ದೆಹಲಿಗೆ ಗುರುವಾರ ಬೆಳಿಗ್ಗೆ ಹೊರಟಿದ್ದೆ. ಮನೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಓಲಾ ಕಂಪನಿ ಕ್ಯಾಬ್ ಕಾಯ್ದಿರಿಸಿದ್ದೆ. ಸ್ಥಳಕ್ಕೆ ಕ್ಯಾಬ್‌ ಬರುತ್ತಿದ್ದಂತೆ ಹತ್ತಿ ಕುಳಿತುಕೊಂಡಿದ್ದೆ. ಯಾವ ವಿಧದಲ್ಲಿ ಪ್ರಯಾಣ ಶುಲ್ಕ ಪಾವತಿಸುತ್ತೀರಾ ಎಂಬುದಾಗಿ ಚಾಲಕ ವಿಚಾರಿಸಿದ್ದ. ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ಹೇಳಿದ್ದೆ. ಅದಕ್ಕೆ ಒಪ್ಪದ ಚಾಲಕ, ನಗದು ನೀಡುವಂತೆ ಕೇಳಿದ್ದ. ಇಲ್ಲದಿದ್ದರೆ, ಬುಕ್ಕಿಂಗ್ ರದ್ದುಪಡಿಸುವುದಾಗಿ ಬೆದರಿಸಿದ್ದ’ ಎಂದು ಯುವತಿ ಹೇಳಿದ್ದಾರೆ.

ADVERTISEMENT

‘ಕೈಯಲ್ಲಿ ಹಣವಿಲ್ಲವೆಂದು ಹೇಳಿದ್ದೆ. ಅಷ್ಟಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದ್ದ ಚಾಲಕ, ಮೈ ಕೈ ಮುಟ್ಟಲಾರಂಭಿಸಿದ್ದ. ದೂರ ನಿಲ್ಲುವಂತೆ ಹೇಳಿದ್ದೆ. ಆಗ ಆತ, ‘ಕ್ಯಾಬ್‌ನಿಂದ ಹೊರಗೆ ಹೋಗು. ಇಲ್ಲದಿದ್ದರೆ, ನಿನ್ನನ್ನೇ ಎತ್ತಾಕೊಂಡು ಹೋಗ್ತೀನಿ’ ಎಂದು ಬೆದರಿಸಿದ್ದ. ಆತಂಕಗೊಂಡು ಓಲಾ ಕಂಪನಿ ಸಹಾಯವಾಣಿಗೆ ಕರೆ ಮಾಡಿದ್ದೆ. ಯಾವುದೇ ಸ್ಪಂದನೆ ಸಿಗಲಿಲ್ಲ. ಕೊನೆಯಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದೆ’

‘ಪೊಲೀಸರು ಬರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಚಾಲಕ, ನನ್ನನ್ನು ಕಾರಿನಿಂದ ತಳ್ಳಿ ಹೊರಟು ಹೋದ. ಸ್ಥಳಕ್ಕೆ ಬಂದ ಪೊಲೀಸರು, ಘಟನೆ ಬಗ್ಗೆ ವಿಚಾರಿಸಿದರು. ಮತ್ತೊಂದು ಕ್ಯಾಬ್‌ನಲ್ಲಿ ನನ್ನನ್ನು ನಿಲ್ದಾಣಕ್ಕೆ ಕಳುಹಿಸಿಕೊಟ್ಟರು. ಈಗ ನಾನು ದೆಹಲಿಯಲ್ಲಿ ಇದ್ದೇನೆ’ ಎಂದು ಯುವತಿ ಹೇಳಿದ್ದಾರೆ.

ಪ್ರತಿಕ್ರಿಯೆಗೆ ಸಿಗದ ಪ್ರತಿನಿಧಿ: ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಓಲಾ ಕಂಪನಿ ಪ್ರತಿನಿಧಿಗಳು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.