ADVERTISEMENT

ಟ್ರಿಪ್‌ ಮಾಡಿದ್ದೇವೆ ಎಂದು ಹೇಳಿ ಓಲಾಕ್ಕೆ ವಂಚನೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 21:24 IST
Last Updated 11 ಜೂನ್ 2020, 21:24 IST
.
.   

ಬೆಂಗಳೂರು: ಗ್ರಾಹಕರಂತೆ ಕಾರುಗಳನ್ನು ತಾವೇ ಬುಕ್‌ ಮಾಡಿ, ಎಲ್ಲಿಗೂ ಹೋಗದೆ ದಿನಕ್ಕೆ 15ರಿಂದ 20 ಟ್ರಿಪ್‌ ಮಾಡಿದ್ದೇವೆಂದು ಪ್ರೋತ್ಸಾಹಧನ ಪಡೆದು ಓಲಾ ಕಂಪನಿಗೆ ಲಕ್ಷಾಂತರ ಹಣ ವಂಚಿಸಿದ ನಾಲ್ವರನ್ನು ಕೇಂದ್ರ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಭರತ್‌ ನಗರದ ನಾಗೇಶ್‌ (36), ಹೊಸಕೆರೆಹಳ್ಳಿ ರವಿ (21) ಬಸಾಪುರದ ಮನು (27), ಕೆಂಪೇಗೌಡ ನಗರದ ಸತೀಶ (32) ಬಂಧಿತರು.

ಆರೋಪಿಗಳಿಂದ ₹23 ಲಕ್ಷ ಮೌಲ್ಯದ ಎರಡು ಇನ್ನೊವಾ ಕಾರು, ಒಂದು ಸ್ವಿಫ್ಟ್ ಕಾರು, 500 ಸಿಮ್‌ ಕಾರ್ಡ್, ಐಡಿ ಕಾರ್ಡ್‌ ಮುದ್ರಿಸುವ ಎರಡು ಪ್ರಿಂಟರ್‌, 16 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ತೆಗೆದುಕೊಂಡ ಆರೋಪಿಗಳು ತಮ್ಮ ಕಾರುಗಳನ್ನು ಓಲಾ ಕಂಪನಿಗೆ ಸೇರಿಸಲು ಆನ್‌ಲೈನ್‌ ಮೂಲಕ ಕಳುಹಿಸಿದ್ದಾರೆ. ಅಲ್ಲದೆ, ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲು ತಮ್ಮ ಬಳಿ 50 ಬುಕ್ಕಿಂಗ್‌ ಐಡಿಗಳು ಇರುವುದಾಗಿ ನಂಬಿಸಿ ತಮ್ಮ ಕಾರುಗಳಿಗೆ ಟ್ರಿಪ್‌ ಒದಗಿಸಲು ಕಂಪನಿಯಿಂದ ಅನುಮತಿಯನ್ನೂ ಪಡೆದುಕೊಂಡಿದ್ದಾರೆ.

ಆರೋಪಿಗಳು ಬೇರೆ, ಬೇರೆ ಮೊಬೈಲ್‌ ಫೋನ್‌ಗಳ ಮೂಲಕ ಗ್ರಾಹಕರಂತೆ ತಾವೇ ಕ್ಯಾಬ್‌ಗಳನ್ನು ಬುಕ್‌ ಮಾಡಿದ್ದಾರೆ. ಆದರೆ, ಆ ಟ್ರಿಪ್‌ನಲ್ಲಿ ಕಾರು ನಿಂತ ಜಾಗದಿಂದ ಅಲುಗಾಡಿಯೇ ಇರುವುದಿಲ್ಲ. ಎಂಜಿನ್‌ ಕೂಡಾ ಸ್ಟಾರ್ಟ್‌ ಮಾಡದೆ, ತಂತ್ರಜ್ಞಾನದ ಮೂಲಕ ಆರೋಪಿಗಳು ಕಂಪನಿಯನ್ನು ವಂಚಿಸಿದ್ದಾರೆ.

‘ಗೂಗಲ್‌ನಲ್ಲಿ ಸಿಗುವ ‘ಜಿಪಿಎಸ್‌ ಮಾಕ್‌ ಆ್ಯಪ್‌’ ಬಳಸಿ ಮಾಕ್‌ ಲೊಕೇಷನ್‌ಗಳನ್ನು (ಫೇಕ್ ಜಿಪಿಎಸ್‌ ಪಾಥ್) ತೋರಿಸಿಕೊಂಡು ಕಾರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಿದೆ ಎಂದು ಕಿ.ಮೀ. ತೋರಿಸಿ ದಿನಕ್ಕೆ 15ರಿಂದ 20 ಟ್ರಿಪ್‌ಗಳನ್ನು ಬುಕ್‌ ಮಾಡಿ ಆರೋಪಿಗಳು ಕಂಪನಿಯಿಂದ ಪ್ರೋತ್ಸಾಹಧನ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.