ADVERTISEMENT

ವೇತನ, ಭತ್ಯೆ ನೀಡಿಲ್ಲ ಎಂದು ಓಲಾ ಉದ್ಯೋಗಿ ಆತ್ಮಹತ್ಯೆ: ಕಂಪನಿ ಸಿಇಒ ವಿರುದ್ಧ FIR

28 ಪುಟಗಳ ಮರಣಪತ್ರ ಬರೆದಿಟ್ಟ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 15:54 IST
Last Updated 20 ಅಕ್ಟೋಬರ್ 2025, 15:54 IST
ಓಲಾ
ಓಲಾ   

ಬೆಂಗಳೂರು: ಓಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಓಲಾ ಎಲೆಕ್ಟ್ರಿಕ್‌ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಂಪನಿಯ ಹೋಮೊಲೋಗೇಷನ್‌ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ.ಅರವಿಂದ್ ಅವರು ಸೆ.28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಿಇಒ ಭವೇಶ್ ಅಗರ್‌ವಾಲ್‌, ಹಿರಿಯ ಅಧಿಕಾರಿಗಳಾದ ಸುಬ್ರತ್ ಕುಮಾರ್ ದಾಸ್‌ ಸೇರಿ ಕಂಪನಿಯ ಸಿಬ್ಬಂದಿಯ ಕಿರುಕುಳ ಹಾಗೂ ಮಾನಸಿಕ ಒತ್ತಡ ಹೇರಿದ್ದು ಕಾರಣ ಎಂಬ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕೆ.ಅರವಿಂದ್ ಅವರ ಸಹೋದರ ಅಶ್ವಿನ್‌ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ಗಳಾದ 108 ಹಾಗೂ 3(5)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ದೂರಿನಲ್ಲಿ ಏನಿದೆ?: ‘ಅರವಿಂದ್ ಅವರು ಕೋರಮಂಗಲದಲ್ಲಿ ಇರುವ ಓಲಾ ಎಲೆಕ್ಟ್ರಿಕ್‌ ಕಂಪನಿಯ ಹೋಮೊಲೊಗೇಷನ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ 2022ರಿಂದ ಕೆಲಸ ಮಾಡುತ್ತಿದ್ದರು. ಚಿಕ್ಕಲ್ಲಸಂದ್ರದ ಮಂಜುನಾಥ್‌ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅರವಿಂದ್ ಬರೆದಿಟ್ಟ ಮರಣಪತ್ರವು ಅವರ ಕೊಠಡಿಯಲ್ಲಿ ದೊರೆತಿದೆ. ಅದರಲ್ಲಿ ಕೆಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ’ ಎಂದು ದೂರು ನೀಡಲಾಗಿದೆ.

‘ನನ್ನ ತಮ್ಮನ ಸಾವಿನ ನಂತರ ಅಂದರೆ ಸೆ.30ರಂದು ಬ್ಯಾಂಕ್‌ ಖಾತೆಗೆ ಕಂಪನಿಯರು ₹17.46 ಲಕ್ಷ ವರ್ಗಾವಣೆ ಮಾಡಿದ್ದರು. ಅದರ ಬಗ್ಗೆ ಅನುಮಾನ ಬಂದಿತ್ತು. ಈ ಸಂಬಂಧ ಓಲಾ ಕಂಪನಿಯ ಹಿರಿಯ ಅಧಿಕಾರಿ ಸುಬ್ರತ್‌ ಕುಮಾರ್ ದಾಸ್‌ ಅವರನ್ನು ವಿಚಾರಿಸಲಾಯಿತು. ಅದಾದ ಮೇಲೆ ಕಂಪನಿಯ ಪ್ರತಿನಿಧಿಗಳಾದ ಕೃತೇಶ್‌ ದೇಸಾಯಿ, ಪರಮೇಶ್, ರೋಷನ್‌ ಅವರು ಮನೆಗೆ ಬಂದು ಅರವಿಂದ್ ಅವರ ಖಾತೆಗೆ ವರ್ಗಾವಣೆ ಮಾಡಿದ್ದ ಹಣದ ಬಗ್ಗೆ ಅಸ್ಪಷ್ಟ ಮಾಹಿತಿ ನೀಡಿ ಕಂಪನಿಯವರ ತಪ್ಪುಗಳನ್ನು ಮರೆಮಾಚಿದಂತೆ ಕಂಡುಬಂದಿತ್ತು’ ಎಂಬ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಬಳಿಕ ಮರಣಪತ್ರವನ್ನು ಪರಿಶೀಲಿಸಿದಾಗ ಕಂಪನಿಯ ಹೆಡ್‌ ಆಫ್‌ ಹೋಮೊಲೇಗೇಷನ್‌ ಎಂಜಿನಿಯರ್‌ ಆಗಿರುವ ಸುಬ್ರತ್‌ಕುಮಾರ್ ದಾಸ್ ಹಾಗೂ ಕಂಪನಿಯ ಮಾಲೀಕರಾದ ಭವೇಶ್ ಅಗರ್‌ವಾಲ್ ಅವರು ಒತ್ತಡ ಹೇರಿದ್ದರು. ಅಲ್ಲದೇ ವೇತನ, ಭತ್ಯೆ ನೀಡದೇ ಕಿರುಕುಳ ನೀಡಿದ್ದರು. ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಆ ಪತ್ರದಲ್ಲಿ ಅರವಿಂದ ಬರೆದಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.