ADVERTISEMENT

ವೃದ್ಧಾಪ್ಯ ವೇತನದ ಆಮಿಷ: ವೃದ್ಧೆಯ ₹ 1.20 ಲಕ್ಷ ಮೌಲ್ಯದ ಚಿನ್ನಕ್ಕೆ ಕನ್ನ!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 20:05 IST
Last Updated 4 ಮಾರ್ಚ್ 2020, 20:05 IST
.
.   

ಬೆಂಗಳೂರು: ವೃದ್ಧಾಪ್ಯ ವೇತನ ಮಾಡಿಸಿ ಕೊಡುವುದಾಗಿ ನಂಬಿಸಿ, ಅಪರಿಚಿತನೊಬ್ಬ ವೃದ್ಧೆಯ ₹ 1.20 ಲಕ್ಷ ಮೌಲ್ಯದ ಒಡವೆ ಲಪಟಾಯಿಸಿದ ಘಟನೆ ಬೊಮ್ಮನಹಳ್ಳಿ ಬಳಿ ನಡೆದಿದೆ.

ಒಡವೆ ಕಳೆದುಕೊಂಡ ಹೊಂಗ ಸಂದ್ರದ ನಿವಾಸಿ ಭಾರತಿ ರಾವ್ (70) ಎಂಬುವರು ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಾರ್ಚ್‌ 3ರಂದು ಬೆಳಿಗ್ಗೆ 10 ಗಂಟೆಗೆ ಮನೆ ಮುಂಭಾಗದ ರಸ್ತೆಯಲ್ಲಿ ಭಾರತಿ ಅವರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಳಿ ಬಂದ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿ, ₹ 5 ಸಾವಿರ ನೀಡಿದರೆ, ವೃದ್ಧಾಪ್ಯ ವೇತನ ಕೊಡಿಸುವುದಾಗಿ ನಂಬಿಸಿದ್ದ. ಬಳಿಕ ಬ್ಯಾಂಕಿಗೆ ತೆರಳಿ ಅರ್ಜಿ ಸಲ್ಲಿಸುವಂತೆ ಪುಸಲಾಯಿಸಿ, ತನ್ನ ಬೈಕ್‍ನಲ್ಲಿ ಸುತ್ತಾಡಿಸಿದ್ದ.

ADVERTISEMENT

ಫೋಟೊ ಅಗತ್ಯವಿದೆಯೆಂದು ಭಾರತಿ ಅವರನ್ನು ಸ್ಟುಡಿಯೊಗೆ ಕರೆದುಕೊಂಡು ಹೋದ ಆತ, ‘ಒಡವೆ ಗಳನ್ನು ಧರಿಸಿರುವುದು ಫೋಟೊದಲ್ಲಿ ಕಾಣಿಸಿದರೆ ವೃದ್ಧಾಪ್ಯ ವೇತನ ಸಿಗುವುದಿಲ್ಲ. ನಿಮ್ಮ ಮೈ ಮೇಲಿರುವ ಒಡವೆಗಳನ್ನು ತೆಗೆದುಕೊಡಿ. ಫೋಟೊ ತೆಗೆದ ಬಳಿಕ ಹಿಂದಿರುಗಿಸುತ್ತೇನೆ’ ಎಂದು ನಂಬಿಸಿದ್ದ.

ಆತನ ಮಾತು ನಂಬಿದ ಭಾರತಿ, ತಾನು ಧರಿಸಿದ್ದ ಒಡವೆಗಳನ್ನು ಆತನಿಗೆ ನೀಡಿದ್ದರು. ಫೋಟೊ ತೆಗೆದ ಬಳಿಕ ಆ ವ್ಯಕ್ತಿ, ಡಬ್ಬವೊಂದನ್ನು ಕೊಟ್ಟು, ‘ಅದರಲ್ಲಿ ನಿಮ್ಮ ಒಡವೆಗಳಿವೆ. ಮನೆಗೆ ಹೋದ ಬಳಿಕ ತೆಗೆದು ನೋಡಿ’ ಎಂದಿದ್ದ. ಫೋಟೊ ಪಡೆದುಕೊಂಡ ಬಳಿಕ, ‘ನಿಮ್ಮ ಮನೆಗೆ ಬಂದು ಅರ್ಜಿಗೆ ಸಹಿ ಮಾಡಿಸಿಕೊಂಡು ವೃದ್ಧಾಪ್ಯ ವೇತನ ಕೊಡಿಸುತ್ತೇನೆ’ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದ.

ಆತನ ಮಾತು ನಂಬಿದ ಭಾರತಿ ಅವರು, ಆಟೊ ರಿಕ್ಷಾದಲ್ಲಿ ಮನೆಗೆ ಬಂದು ಅಪರಿಚಿತ ವ್ಯಕ್ತಿ ನೀಡಿದ ಡಬ್ಬ ತೆಗೆದು ನೋಡಿದಾಗ ಚಿನ್ನಾಭರಣ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.