ADVERTISEMENT

ವೃದ್ಧೆಯ ಕೊಂದು ನಾಲೆಗೆ ಶವ ಎಸೆದಿದ್ದ ಗ್ಯಾಂಗ್‌ ಸೆರೆ

ಅಪಹರಿಸಿ ಕುತ್ತಿಗೆ ಹಿಸುಕಿದ್ದರು: ಮಹಿಳೆಯರು ಸೇರಿ ಆರು ಮಂದಿಯ ಕೃತ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 20:16 IST
Last Updated 6 ಮಾರ್ಚ್ 2019, 20:16 IST

ಬೆಂಗಳೂರು: ಚಿನ್ನಾಭರಣದ ಆಸೆಗೆ ವೃದ್ಧೆಯನ್ನು ಕಾರಿನಲ್ಲೇ ಕೊಂದು ಶವವನ್ನು ತುರುವೇಕೆರೆ ಸಮೀಪದ ಹೇಮಾವತಿ ನಾಲೆಗೆ ಎಸೆದು ಬಂದಿದ್ದ ಇಬ್ಬರು ಮಹಿಳೆಯರಿರುವ ಹಂತಕರ ಗ್ಯಾಂಗ್ ನಾಲ್ಕೂವರೆ ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದೆ.

ಮಡಿವಾಳ ನಿವಾಸಿ ಹೇಮಾವತಿ (73) ಕೊಲೆಯಾದವರು. ಈ ಸಂಬಂಧ ಗಾರ್ವೆಬಾವಿಪಾಳ್ಯದ ಪ್ರಸನ್ನ (34), ನಾಗನಾಥಪುರದ ತಿಪ್ಪೇಶ್ ಅಲಿಯಾಸ್ ರಾಕಿ (30), ಆತನ ಪತ್ನಿ ರಕ್ಷಿತಾ (19), ಆಡುಗೋಡಿಯ ಮಧುಸೂದನ್ (30), ಶಾಕಾಂಬರಿನಗರದ ಮಾದೇಶ ಅಲಿಯಾಸ್ ಜೋಗಿ ಹಾಗೂ ಹೊಸಕೆರೆಹಳ್ಳಿಯ ಭಾಗ್ಯ (32) ಎಂಬುವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ದೇವಸ್ಥಾನಕ್ಕೆ ಕರೆದು ಕೊಂದರು: ಹೇಮಾವತಿ ಮಡಿವಾಳದಲ್ಲಿ ಒಂಟಿಯಾಗಿ ನೆಲೆಸಿದ್ದರು. ಕೋರಮಂಗಲದ ಕೆಎಸ್‌ಆರ್‌ಪಿ ಆವರಣದಲ್ಲಿರುವ ‘ಪೊಲೀಸ್ ಪಬ್ಲಿಕ್ ಸ್ಕೂಲ್‌’ನಲ್ಲಿ ಶಿಕ್ಷಕಿಯಾಗಿರುವ ಅವರ ಮಗಳು ಉಮಾ ಪಾರ್ವತಿ, ಪತಿ–ಮಕ್ಕಳ ಜತೆ ಹೊಂಗಸಂದ್ರದಲ್ಲಿ ನೆಲೆಸಿದ್ದರು.

ADVERTISEMENT

ಹೇಮಾವತಿ ಅವರ ಮನೆಯ ಪಕ್ಕದಲ್ಲೇ ನೆಲೆಸಿದ್ದ ಆರೋಪಿ ಪ್ರಸನ್ನ, ಬೀರು ರಿಪೇರಿ ಕೆಲಸ ಮಾಡಿಕೊಂಡಿದ್ದ. ಒಂಟಿಯಾಗಿದ್ದ ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಲು ಸಂಚು ರೂಪಿಸಿದ ಆತ, ಅದಕ್ಕೆ ಉಳಿದ ಆರೋಪಿಗಳ ನೆರವು ಕೋರಿದ್ದ. ಹಣದಾಸೆಗೆ ಎಲ್ಲರೂ ಒಟ್ಟಾಗಿದ್ದರು.

ಅ.24ರ ಬೆಳಿಗ್ಗೆ ಹೇಮಾವತಿ ಅವರ ಮನೆಗೆ ಹೋಗಿದ್ದ ‍ಪ್ರಸನ್ನ, ‘ನಾನು ಹಾಗೂ ಸಂಬಂಧಿಕರು ತುರುವೇಕೆರೆಯ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ. ಒಬ್ಬರೇ ಮನೆಯಲ್ಲಿದ್ದು ಏನು ಮಾಡುತ್ತೀರಿ? ನಮ್ಮೊಟ್ಟಿಗೆ ನೀವೂ ಬನ್ನಿ’ ಎಂದು ಕರೆದಿದ್ದ. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಸ್ವಲ್ಪ ಸಮಯದಲ್ಲೇ ಉಳಿದ ಆರೋಪಿಗಳು ಕಾರಿನಲ್ಲಿ ಮನೆ ಹತ್ತಿರ ಬಂದಿದ್ದರು. ನಂತರ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಗಮಧ್ಯೆ ನಿದ್ರೆ ಮಾತ್ರೆ ಬೆರೆಸಿದ ತಂಪು ಪಾನೀಯವನ್ನು ಕುಡಿಸಿದ್ದ ಆರೋಪಿಗಳು, ಅವರು ನಿದ್ರೆಗೆ ಜಾರುತ್ತಿದ್ದಂತೆಯೇ ಕನಕಪುರದ ನಿರ್ಜನ ಪ್ರದೇಶದ ಕಡೆಗೆ ಕಾರು ತಿರುಗಿಸಿದ್ದರು. ಅಲ್ಲಿ ಉಸಿರುಗಟ್ಟಿಸಿ ಕೊಂದು ಎರಡು ಚಿನ್ನದ ಸರಗಳು, ಉಂಗುರ, ಕಿವಿ ಓಲೆಗಳನ್ನು ಬಿಚ್ಚಿಕೊಂಡು, ಮೊಬೈಲನ್ನೂ ತೆಗೆದುಕೊಂಡಿದ್ದರು. ಕೊನೆಗೆ ತುರುವೆಕರೆಗೆ ತೆರಳಿ ನಾಲೆಗೆ ಶವ ಎಸೆದು ರಾತ್ರಿಯೇ ನಗರಕ್ಕೆ ಮರಳಿದ್ದರು.

‘ತಾಯಿ ಅ.24ರ ಬೆಳಿಗ್ಗೆ ಕರೆ ಮಾಡಿ ಮಾತನಾಡಿದ್ದರು. ಸಂಜೆ ನಂತರ ಸಂಪರ್ಕಕ್ಕೇ ಸಿಗಲಿಲ್ಲ. ಮರುದಿನ ಬೆಳಿಗ್ಗೆ ಮನೆ ಹತ್ತಿರ ಹೋದರೆ ಬೀಗ ಹಾಕಿತ್ತು. ಅಕ್ಕ–ಪಕ್ಕದ ಮನೆಯವರು, ಸಂಬಂಧಿಕರು ಸೇರಿದಂತೆ ಗೊತ್ತಿರುವ ಎಲ್ಲರ ಬಳಿ ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ, ಅ.28ರಂದು ಠಾಣೆಗೆ ದೂರು ಕೊಟ್ಟಿದ್ದೆ’ ಎಂದು ಉಮಾ ಪಾರ್ವತಿ ತಿಳಿಸಿದರು.

‘ಪ್ರಸನ್ನ ನಮ್ಮ ಕುಟುಂಬಕ್ಕೆ ಗೊತ್ತಿದ್ದವನೇ. ನಮ್ಮ ಜೊತೆ ಬಂದು ಆತನೂ ತಾಯಿಯನ್ನು ಹುಡುಕಿದ್ದ. ಹೀಗಾಗಿ, ಆತನ ಮೇಲೆ ಅನುಮಾನವೇ ಬಂದಿರಲಿಲ್ಲ. ಮಾರ್ಚ್‌ 1ರಂದು ಮಡಿವಾಳ ಪೊಲೀಸರು ಕರೆ ಮಾಡಿ, ‘ಪ್ರಸನ್ನನೇ ನಿಮ್ಮ ತಾಯಿಯನ್ನು ಕೊಂದಿರುವುದು’ ಎಂದು ಹೇಳಿದಾಗ ಅಚ್ಚರಿಯಾಯಿತು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.

ಮೊಬೈಲ್‌ನಿಂದಲೇ ಸಿಕ್ಕಿಬಿದ್ದರು

‘ಹೇಮಾವತಿ ನಾಪತ್ತೆಯಾದ ದಿನದಿಂದಲೂ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅದನ್ನು ತೆಗೆದುಕೊಂಡು ಹೋಗಿದ್ದ ಪ್ರಸನ್ನ, ಇತ್ತೀಚೆಗೆ ಚಾಲೂ ಮಾಡಿ ಬೇರೆ ಸಿಮ್ ಹಾಕಿದ್ದ. ಐಎಂಇಐ ಸಂಖ್ಯೆ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದ ಸಿಬ್ಬಂದಿ, ಮೊಬೈಲ್ ಚಾಲೂ ಆಗುತ್ತಿದ್ದಂತೆಯೇ ಕಾರ್ಯಾಚರಣೆ ಪ್ರಾರಂಭಿಸಿ ಪ್ರಸನ್ನನನ್ನು ವಶಕ್ಕೆ ಪಡೆದರು. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಉಳಿದ ಆರೋಪಿಗಳ ಬಗ್ಗೆಯೂ ಬಾಯ್ಬಿಟ್ಟ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವೃದ್ಧೆಯ ಶವ, ಡಿಎನ್‌ಎ ಪರೀಕ್ಷೆ

ಡಿ.19ರಂದು ತುರುವೆಕೆರೆ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧೆಯೊಬ್ಬರ ಶವ ಪತ್ತೆಯಾಗಿತ್ತು. 15 ದಿನ ಕಳೆದರೂ ವಾರಸುದಾರರು ಪತ್ತೆಯಾಗದ ಕಾರಣ, ಸ್ಥಳೀಯ ಪೊಲೀಸರೇ ಅಂತ್ಯಕ್ರಿಯೆ ಮುಗಿಸಿದ್ದರು. ಈಗ ಉಮಾ ಪಾರ್ವತಿ ಅವರ ರಕ್ತದ ಮಾದರಿ ಪಡೆದು ಡಿಎನ್‌ಎ ಪರೀಕ್ಷೆ ಮಾಡಿದಾಗ, ಅದು ಹೇಮಾವತಿ ಅವರದ್ದೇ ಶವ ಎಂಬುದು ಖಚಿತವಾಗಿದೆ.

‘ವಾರಸುದಾರರಿಲ್ಲದ ಶವಗಳು ಪತ್ತೆಯಾದಾಗ ಪೊಲೀಸರು ರಕ್ತದ ಮಾದರಿ ಪಡೆದು ನಂತರವೇ ಅಂತ್ಯಕ್ರಿಯೆ ಮಾಡಬೇಕು ಎಂಬ ನಿಯಮವಿದೆ. ಅಂತೆಯೇ ತುರುವೇಕೆರೆ ಪೊಲೀಸರೂ ಅಂತ್ಯಕ್ರಿಯೆಗೂ ಮುನ್ನ ಮೃತರ ರಕ್ತದ ಮಾದರಿ ಸಂಗ್ರಹಿಸಿಕೊಂಡಿದ್ದರು. ಅದು ಶವ ಗುರುತಿಸಲು ನೆರವಾಯಿತು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.