
ಬೆಂಗಳೂರು: ಅಂತರ್‌ಲಿಂಗಿಗಳು, ಲಿಂಗ ಪರಿವರ್ತಿತರು, ಲಿಂಗತ್ವಾತೀತರು, ಕೋಥಿಯರು, ಲೈಂಗಿಕ ಕಾರ್ಯಕರ್ತೆಯರು ಸೇರಿದಂತೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಕಲೆ, ಸಂಸ್ಕೃತಿ, ಬದುಕು–ಬವಣೆಯನ್ನು ಅನಾವರಣಗೊಳಿಸುವ ‘ಒಂದೆಡೆ ರಂಗೋತ್ಸವ’ಕ್ಕೆ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್) ಸಿದ್ಧವಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ ಕಾರ್ಯಕ್ರಮವನ್ನು ಫೆ.21 ಮತ್ತು 22ರಂದು ಹಮ್ಮಿಕೊಂಡಿದೆ. ಪ್ರವಾಸೋದ್ಯಮ ಸಚಿವಾಲಯ, ಭಾರತೀಯ ಸಾಮಾಜಿಕ ಸಂಸ್ಥೆ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಮತ್ತು ‘ಒಂದೆಡೆ’ ಸಂಸ್ಥೆಗಳ ಸಹಯೋಗದಲ್ಲಿ ಈ ಉತ್ಸವ ನಡೆಯಲಿದೆ.
ಸಲಿಂಗ, ದ್ವಿಲಿಂಗ ಲೈಂಗಿಕ ಪ್ರವೃತ್ತಿಯವರು ಸೇರಿದಂತೆ ಎಲ್ಲರನ್ನೂ ಸೇರಿಸಿ ‘ಸೆಕ್ಸ್ ಮೈನಾರಿಟಿ’ (ಲೈಂಗಿಕ ಅಲ್ಪಸಂಖ್ಯಾತರು) ಎಂಬ ಛತ್ರಿಯಡಿ ಸೇರಿಸಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಇದರಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ ಲಿಂಗತ್ವ ಅಲ್ಪಸಂಖ್ಯಾತರೂ ಇದ್ದಾರೆ. ಯಾವುದೇ ಲಿಂಗದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡದ ಲಿಂಗತ್ವಾತೀತರೂ ಇದ್ದಾರೆ. ಗಂಡಾಗಿ ಹುಟ್ಟಿ ಹೆಣ್ಣಿನ ಮನಸ್ಸನ್ನು ಹೊಂದಿದ್ದರೂ ಹೆಣ್ಣಾಗಿ ಪರಿವರ್ತನೆಗೊಳ್ಳದ ಕೋಥಿ ಸಮುದಾಯದವರೂ ಸೇರಿದ್ದಾರೆ. ಹೀಗೆ ವೈವಿಧ್ಯ ಸಮುದಾಯಗಳಿದ್ದು, ಅವರಲ್ಲಿ ಅವರದ್ದೇ ಆದ ಅಸ್ಮಿತೆ, ಸಂಸ್ಕೃತಿ ಇದೆ. ಇಲ್ಲೂ ಪ್ರತಿಭಾವಂತರು ಇದ್ದಾರೆ. ಎಲ್ಲರ ಪ್ರತಿಭೆಗಳನ್ನು ಅನಾವರಣ ಮಾಡಲು ‘ಒಂದೆಡೆ ರಂಗೋತ್ಸವವು’ ವೇದಿಕೆಯಾಗಲಿದೆ ಎಂದು ‘ಒಂದೆಡೆ’ ಸಂಸ್ಥಾಪಕಿ, ಕಾರ್ಯಕ್ರಮದ ರೂವಾರಿ ಅಕ್ಕೈ ಪದ್ಮಶಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ಅಕ್ಕೈ ಅವರ ಬದುಕಿನ ಪಯಣವನ್ನು ಬಿಂಬಿಸುವ ‘ಅಕ್ಕೈ: ಕರುಣೆಗೊಂದು ಸವಾಲು’ ರಂಗ ಪ್ರದರ್ಶನವನ್ನು ಫೆ.21ರಂದು ಬೆಳಿಗ್ಗೆ 11.45ಕ್ಕೆ ನಯನಾ ಸೂದ್, ರಾಜಗುರು ಮತ್ತು ತಂಡದವರು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮಧ್ಯಾಹ್ನ 12. 45ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 2ರಿಂದ ವೈಷ್ಣವಿ ನಾಟ್ಯಶಾಲಾ ತಂಡದವರು ಭರತನಾಟ್ಯ ಪ್ರದರ್ಶಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಈ ಸಮುದಾಯದವರಿಂದ ಕವಿಗೋಷ್ಠಿ ನಡೆಯಲಿದೆ. ಸಂಜೆ 4ಕ್ಕೆ ಸಾಧನಾ ಮಹಿಳಾ ಸಂಘವು ‘ಹಸಿವು ಕನಸು’ ರಂಗ ಪ್ರದರ್ಶನ ನೀಡಲಿದೆ. ನಿಂಬೆಹಣ್ಣು ಮಾರುವ ಕಾಯಕದ ಚಂದ್ರಿಕಾ ಅವರು ತನ್ನ ತಂಡದೊಂದಿಗೆ ಕರಗಾಟ ಪ್ರದರ್ಶನ ನೀಡಲಿದ್ದಾರೆ. ಲೈಂಗಿಕ ಕಾರ್ಯಕರ್ತೆಯರೂ ಸೇರಿದಂತೆ ಎಲ್ಲರೂ ಹಾಡು, ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಅಕ್ಕೈ ವಿವರಿಸಿದರು.
ರೆಡ್ಡಮ್ಮನ ನೇತೃತ್ವದಲ್ಲಿ ಜೋಗಪ್ಪ ಸಂಘದವರು ಯಲ್ಲಮ್ಮನನ್ನು ಮುಂದಿಟ್ಟುಕೊಂಡು ಚೌಡಕಿ ಸ್ತುತಿ ಮಾಡುವ ಮೂಲಕ ಫೆ.22ರ ಕಾರ್ಯಕ್ರಮ ಆರಂಭಗೊಳ್ಳಲಿದೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಯಾದಾಗ ಉಂಟಾದ ಯಾತನೆಗಳನ್ನು ಬಿಂಬಿಸುವ ‘ಜರ್ನಿ ಎ ಟು ಇ’ ಏಕಪಾತ್ರಾಭಿನಯವನ್ನು ರೂಮಿ ಹರೀಶ್ ನಡೆಸಿಕೊಡಲಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರೇ ನಟಿಸಿರುವ ಸಮುದಾಯದ್ದೇ ಕಥೆಯಾಗಿರುವ ‘ತಲ್ಕಿ’ ನಾಟಕ ಮಧ್ಯಾಹ್ನ 2.30ರಿಂದ ಪ್ರದರ್ಶಿಸಲಿದ್ದಾರೆ. ಒಂದೆಡೆ ತಂಡದ ಸದಸ್ಯರಿಂದ ಸಾಂಸ್ಕೃತಿಕ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಜಾತಿ ಲಿಂಗ ಧರ್ಮ ಭೇದಗಳಿಲ್ಲದೇ ಎಲ್ಲರೂ ಒಂದು ಸಮಯದಾಯವಾಗಿ ಒಟ್ಟು ಸೇರಿ ಸಂಭ್ರಮಿಸುವ ಲೈಂಗಿಕ ಅಲ್ಪಸಂಖ್ಯಾತರ ಉತ್ಸವ ಇದು.– ಅಕ್ಕೈ ಪದ್ಮಶಾಲಿ, ‘ಒಂದೆಡೆ’ ಸಂಸ್ಥಾಪಕಿ
ಒಳಗೊಳ್ಳುವಿಕೆಯು ಕೆಲವರಿಗಷ್ಟೇ ಸಂಬಂಧಿಸಿದ್ದಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಸಹಿತ ಎಲ್ಲರೂ ಭಾಗಿಯಾಗಿಬೇಕು ಎಂಬ ಕಾರಣಕ್ಕೆ ರಂಗೋತ್ಸವ ಆಯೋಜಿಸಲಾಗಿದೆ.– ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಿರ್ದೇಶಕಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.