ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪ್ರಕಾಶ ಕಲ್ಲೂರ ಎಂಬ ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ.
‘ಅಫಜಲಪುರ ತಾಲ್ಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಪ್ರಕಾಶ ಪ್ರಕರಣದ ಮತ್ತೊಬ್ಬ ಆರೋಪಿ ರುದ್ರಗೌಡ ಡಿ.ಪಾಟೀಲ ಜೊತೆ ಹಲವು ವರ್ಷಗಳಿಂದ ಮನೆ ಮತ್ತು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಇಲ್ಲಿನ ಎಚ್‌ಕೆಇ ಸಂಸ್ಥೆಯ ಎಂ.ಎಸ್.ಇರಾನಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದ ಪ್ರಭು ಎಂಬ ಅಭ್ಯರ್ಥಿಗೆ ಬ್ಲೂಟೂತ್ ಕೊಟ್ಟು, ಹಣ ಪಡೆದ ಆರೋಪ ಪ್ರಕಾಶ ಮೇಲಿದೆ’ ಎಂದು ಮೂಲಗಳು ತಿಳಿಸಿವೆ.
‘ರುದ್ರಗೌಡನ ಕಟ್ಟಾ ಕೆಲಸಗಾರರಲ್ಲಿ ಪ್ರಕಾಶ ಕೂಡ ಒಬ್ಬ. ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡಿ, ಅವರಿಂದ ಪಡೆದ ಹಣವನ್ನು ರುದ್ರಗೌಡಗೆ ತಲುಪಿಸುತ್ತಿದ್ದ. ವ್ಯವಹಾರಕ್ಕೂ ಮುನ್ನ ಅಭ್ಯರ್ಥಿಗಳು ಪ್ರಕಾಶ ಜೊತೆ ಮಾತನಾಡಬೇಕಿತ್ತು. ಸಿಐಡಿ ವಶದಲ್ಲಿರುವ ರುದ್ರಗೌಡ ನೀಡಿದ ಮಾಹಿತಿ ಆಧರಿಸಿ ಪ್ರಕಾಶಗೆ ಬಂಧಿಸಲಾಗಿದೆ. ಶುಕ್ರವಾರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 13 ದಿನ ಸಿಐಡಿ ಕಸ್ಟಡಿಗೆ ನೀಡುವಂತೆ ಕೋರಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.