ADVERTISEMENT

ಪುತ್ರನ ಆನ್​​ಲೈನ್ ಬೆಟ್ಟಿಂಗ್ ಗೀಳಿಗೆ ಅಪ್ಪನ ಆಸ್ತಿ ಮಾರಾಟ

Online Booking ಬೆಟ್ಟಿಂಗ್‌ ಸಾಲ: ಕಳ್ಳತನಕ್ಕಿಳಿದ ಸಾಫ್ಟ್‌ವೇರ್‌ ಎಂಜಿನಿಯರ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 16:33 IST
Last Updated 8 ಜುಲೈ 2025, 16:33 IST
ಮೂರ್ತಿ 
ಮೂರ್ತಿ    

ಬೆಂಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಸಾಲ ತೀರಿಸಲು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಂಗಸಂದ್ರ ನಿವಾಸಿ ಕೆ.ಎನ್. ಮೂರ್ತಿ (27) ಬಂಧಿತ ಆರೋಪಿ.

ಆರೋಪಿಯಿಂದ ₹17 ಲಕ್ಷ ಮೌಲ್ಯದ 245 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಶಿವಮೊಗ್ಗದ ಆರೋಪಿ ಬಿಸಿಎ ಪಧವೀಧರನಾಗಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಬೇಗೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದ. ಆನ್‌ಲೈನ್ ಬೆಟ್ಟಿಂಗ್‌ ಆಡುತ್ತಿದ್ದ. ಬೆಟ್ಟಿಂಗ್‌ನಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ಹೀಗಾಗಿ, ಸಾಲದ ಹೊರೆ ಹೆಚ್ಚಾಗಿತ್ತು. ಸಾಲ ತೀರಿಸಲು ನಗರದ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿ ತಂದೆ ಅಣ್ಣಪ್ಪ ಶಿವಮೊಗ್ಗದಲ್ಲಿ ವಾಸವಾಗಿದ್ದರು. ಪುತ್ರ ಮಾಡಿದ್ದ ಸಾಲದಲ್ಲಿ ಸುಮಾರು ₹25 ಲಕ್ಷವನ್ನು ಊರಿನಲ್ಲಿದ್ದ ಜಮೀನು ಮಾರಾಟ ಮಾಡಿ ತೀರಿಸಿದ್ದರು. ಇನ್ನಷ್ಟು ಸಾಲ ತೀರಿಸಲು ನಗರಕ್ಕೆ ಬಂದು ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೂ, ಮಗನ ಆನ್‌ಲೈನ್ ಬೆಟ್ಟಿಂಗ್ ವ್ಯಾಮೋಹ ಕಡಿಮೆ ಆಗಿರಲಿಲ್ಲ ಎಂದು ಪೊಲೀಸರು ಹೇಳಿದರು.

‘ಇತ್ತೀಚೆಗೆ ಬಿನ್ನಿಮಿಲ್ ಅಂಗಾಳಪರಮೇಶ್ವರಿ ದೇವಸ್ಥಾನದ ಬಳಿ ದೇವರ ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2022ರಿಂದಲೂ ರಾಜಗೋಪಾಲನಗರ, ಸುದ್ದಗುಂಟೆಪಾಳ್ಯ, ಆವಲಹಳ್ಳಿ ಹಾಗೂ ಕೋಣನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿರುವುದು ಗೊತ್ತಾಗಿತ್ತು. ಕದ್ದ ಚಿನ್ನಾಭರಣವನ್ನು ಮಡಿವಾಳ, ಪರಪ್ಪನ ಅಗ್ರಹಾರ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಚಿನ್ನಾಭರಣ ಅಂಗಡಿಗಳಲ್ಲಿ ಅಡವಿಟ್ಟು ಹಣ ಸಂಪಾದಿಸಿ ಬೆಟ್ಟಿಂಗ್ ಆಡುತ್ತಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.