ADVERTISEMENT

ವಿಚ್ಛೇದಿತೆಯಿಂದ ಹಣ ಪಡೆದು ವಂಚಿಸಿದ ವರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 17:19 IST
Last Updated 28 ಡಿಸೆಂಬರ್ 2020, 17:19 IST

ಬೆಂಗಳೂರು: ವೈವಾಹಿಕ ಜಾಲತಾಣದ ಮೂಲಕ ವಿಚ್ಛೇದಿತೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಯೊಬ್ಬ, ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ. ಈ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಕಾರ್ತಿಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೌಟುಂಬಿಕ ಕಲಹದಿಂದ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆ, 13 ವರ್ಷದ ಮಗಳ ಜೊತೆ ವಾಸವಿದ್ದರು. ಎರಡನೇ ಮದುವೆಯಾಗಲು ವರನನ್ನು ಹುಡುಕುತ್ತಿದ್ದ ಮಹಿಳೆ, ಶಾದಿ ಡಾಟ್‌ ಕಾಮ್‌ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಮದುವೆ ಆಗುವುದಾಗಿ ಹೇಳಿದ್ದ. ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್‌ ಖರೀದಿಸೋಣವೆಂದು ಹೇಳಿ. ₹ 70 ಲಕ್ಷ ಪಡೆದಿದ್ದ. ಈ ಸಂಗತಿ ದೂರಿನಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಇತ್ತೀಚೆಗೆ ಮಹಿಳೆಯನ್ನು ಪೀಡಿಸಲಾರಂಭಿಸಿದ್ದ ಆರೋಪಿ, ಪುನಃ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ 13 ವರ್ಷದ ಮಗಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಆತಂಕಗೊಂಡಿದ್ದ ಮಹಿಳೆ, ₹ 28 ಲಕ್ಷ ನೀಡಿದ್ದರು. ಇದಾದ ನಂತರ ಆರೋಪಿ ಪರಾರಿಯಾಗಿದ್ದಾನೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.