ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಬಡಾವಣೆಯಲ್ಲಿ ಶೇ 10ರಷ್ಟೇ ಮತದಾನ

ಜಾಲಹಳ್ಳಿಯ ಮತಗಟ್ಟೆಯಲ್ಲಿ ಗರಿಷ್ಠ ಮತದಾನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:13 IST
Last Updated 4 ನವೆಂಬರ್ 2020, 19:13 IST
ರಾಜರಾಜೇಶ್ವರಿ ನಗರ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಜೆಎಸ್ ಪದವಿಪೂರ್ವ ಕಾಲೇಜಿನಲ್ಲಿ ಮತದಾರರು ಮತ ಚಲಾಯಿಸಲು ಸಾಲ ನಿಂತಿರುವ ದೃಶ್ಯ -ಪ್ರಜಾವಾಣಿ ಚಿತ್ರ
ರಾಜರಾಜೇಶ್ವರಿ ನಗರ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಜೆಎಸ್ ಪದವಿಪೂರ್ವ ಕಾಲೇಜಿನಲ್ಲಿ ಮತದಾರರು ಮತ ಚಲಾಯಿಸಲು ಸಾಲ ನಿಂತಿರುವ ದೃಶ್ಯ -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನ ನಡೆದಿರುವುದು ಲಗ್ಗೆರೆಯ ಸ್ವಾತಂತ್ರ್ಯ ಹೋರಾಟಗಾರರ ಸೊಸೈಟಿ ಬಡಾವಣೆಯಲ್ಲಿ (ಎಫ್‌.ಎಫ್‌ ಲೇಔಟ್‌). ಈ ಬಡಾವಣೆಯ ಮೌಂಟ್‌ ಸಿನೊರಿಯಾ ಶಾಲೆಯ ಮತಗಟ್ಟೆಯ (ಸಂಖ್ಯೆ 201 ಎ) ಒಟ್ಟು ಮತದಾರರಲ್ಲಿ ಶೇ 10ರಷ್ಟು ಮಂದಿ ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

‘ಹೆಚ್ಚಿನ ಮತಗಟ್ಟೆಗಳಲ್ಲಿ ಶೇ 30ರಿಂದ 45ರಷ್ಟು ಮತದಾನವಾಗಿದೆ. ಬೆರಳೆಣಿಕೆ ಕಡೆ ಮಾತ್ರ ಶೇ 15ಕ್ಕಿಂತಲೂ ಕಡಿಮೆ ಮತದಾನವಾಗಿದೆ. ಲಗ್ಗೆರೆ ವಾರ್ಡ್‌ನ ಎಫ್‌.ಎಫ್‌ ಬಡಾವಣೆಯ ಮೌಂಟ್‌ ಸಿನೊರಿಯ ಶಾಲೆಯ ಮತಗಟ್ಟೆಯಲ್ಲಿ ಶೇ 10.75ರಷ್ಟು ಹಾಗೂ ಇದೇ ವಾರ್ಡ್‌ನ ಮುನೇಶ್ವರ ಬಡಾವಣೆಯ ಅನಿಕೇತನ ಕಿಶೋರ ಕೇಂದ್ರ ಶಾಲೆಯ ಮತಗಟ್ಟೆಯಲ್ಲೂ (ಸಂಖ್ಯೆ 185 ಎ) ತೀರಾ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಇಲ್ಲಿ ಶೇ 14.06ರಷ್ಟು ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದಾರೆ’ ಎಂದು ಚುನಾವಣಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಗ್ಗೆರೆ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗಳಲ್ಲಿ ಕೆಲಸಕ್ಕಿರುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದರು. ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಬಹುತೇಕ ಕಾರ್ಮಿಕರು ಊರಿಗೆ ಮರಳಿದ್ದಾರೆ. ಅವರಲ್ಲಿ ಬಹುತೇಕರು ಮರಳಿ ಬಂದಿಲ್ಲ. ಈ ಕಾರಣಕ್ಕಾಗಿ ಇಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ಆಗಿರಬಹುದು’ ಎಂದು ವಿಶ್ಲೇಷಿಸುತ್ತಾರೆ ಸ್ಥಳೀಯರು.

ADVERTISEMENT

ಗೋಕುಲದ ಎನ್‌ಎವಿಕೆಎಸ್‌ ಎಜುಕೇಷನ್‌ ಸೆಂಟರ್‌ನ ಹೆಚ್ಚುವರಿ ಮತಗಟ್ಟೆ (ಸಂಖ್ಯೆ 10 ಎ) ಅತ್ಯಂತ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಒಂದು. ಇಲ್ಲಿ ಶೇ 14.54ರಷ್ಟು ಮತದಾನವಾಗಿದೆ.

ಅತೀ ಹೆಚ್ಚು ಮತದಾನವಾಗಿರುವುದು ಜಾಲಹಳ್ಳಿಯ ಕಟ್ನಾನಗರದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ (ಸಂಖ್ಯೆ 29). ಇಲ್ಲಿ ಶೇ 84ರಷ್ಟು ಮತದರರು ಹಕ್ಕು ಚಲಾಯಿಸಿದ್ದಾರೆ. ಇದೇ ಶಾಲೆಯ ಇನ್ನೊಂದು ಮತಗಟ್ಟೆಯಲ್ಲಿ (ಸಂಖ್ಯೆ 29ಎ) ಶೇ 82.24 ಮಂದಿ ಮತದಾನ ಮಾಡಿದ್ದಾರೆ.

79 ಮಂದಿ ತೃತೀಯಲಿಂಗಿ ಮತದಾರರು ಈ ಕ್ಷೇತ್ರದಲ್ಲಿದ್ದರು. ಅವರಲ್ಲಿ 16 ಮಂದಿ ಮಾತ್ರ ಮತದಾನ ಮಾಡಿದ್ದಾರೆ. 1,08,882 ಮಂದಿ ಪುರುಷರು ಹಾಗೂ 1,00,513 ಮಹಿಳೆಯರು ಮತ ಚಲಾಯಿಸಿದ್ದಾರೆ.

ಅಂಕಿ ಅಂಶ

45.31%: ಆರ್‌.ಆರ್.ನಗರ ಕ್ಷೇತ್ರದಲ್ಲಿ ಮತದಾನ ಪ್ರಮಾಣ

4,62,201:ಕ್ಷೇತ್ರದ ಒಟ್ಟು ಮತದಾರರು

2,09,411:ಮತ ಚಲಾಯಿಸಿದವರು

ಉಳಿಕೆ ಪಿಪಿಇ ಕಿಟ್‌ ಬಿಬಿಎಂಪಿ ಬಳಕೆಗೆ

ಕೋವಿಡ್‌ ಹರಡುತ್ತಿರುವ ಸಂದರ್ಭದಲ್ಲಿ ಆರ್‌.ಆರ್‌.ನಗರ ಕ್ಷೇತ್ರದ ಮತದಾನ ನಡೆದಿದ್ದರಿಂದ ಸೋಂಕು ಹರಡದಂತೆ ತಡೆಯಲು ಬಿಬಿಎಂಪಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿತ್ತು. ಚುನಾವಣಾ ಸಿಬ್ಬಂದಿಗೆ ಹಾಗೂ ಕೊರೊನಾ ಸೋಂಕಿತರಿಗೆ ಒದಗಿಸಲು ಬಿಬಿಎಂಪಿ 4 ಲಕ್ಷಕ್ಕೂ ಅಧಿಕ ಕೈಗವಸು, 4,168ವೈಯಕ್ತಿಕ ಸುರಕ್ಷತಾ ಸಾಧನಗಳು (ಪಿಪಿಇ ಕಿಟ್‌), ಅಷ್ಟೇ ಸಂಖ್ಯೆಯ ಮುಖಕವಚ (ಫೇಸ್‌ ಶೀಲ್ಡ್‌), 3,156 ಲೀಟರ್ ಸ್ಯಾನಿಟೈಸರ್‌ಹಾಗೂ 678 ಉಷ್ಣತಾಮಾಪಕಗಳನ್ನು ಖರೀದಿಸಿತ್ತು.

ಮತದಾನದ ಪ್ರಮಾಣ ಶೇ 50 ದಾಟದ ಕಾರಣ ಖರೀದಿಸಿದ್ದ ಅರ್ಧದಷ್ಟು ಕೈಗವಸುಗಳು ಬಳಕೆಯಾಗಿಲ್ಲ. ಕ್ಷೇತ್ರದಲ್ಲಿದ್ದ 1400 ಕೊರೊನಾ ಸೋಂಕಿತರಲ್ಲಿ 148 ಮಂದಿ ಮಾತ್ರ ಇಲ್ಲಿನ ಮತದಾರರಾಗಿದ್ದರು. ಅವರಲ್ಲಿ ನಾಲ್ವರು ಸೋಂಕಿತರು ಮಾತ್ರ ಪಿಪಿಇ ಕಿಟ್‌ ಧರಿಸಿ ಬಂದು ಮತದಾನ ಮಾಡಿದ್ದರು. ಹಾಗಾಗಿ ಬಹುತೇಕ ಪಿಪಿಇ ಕಿಟ್‌ಗಳು ಹಾಗೆಯೇ ಉಳಿದಿವೆ. ಉಷ್ಣತಾ ಮಾಪಕಗಳನ್ನು ಮರುಬಳಕೆ ಮಾಡಬಹುದಾಗಿದೆ. ಇವುಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

‘ಕೋವಿಡ್‌ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಪಿಪಿಇ ಕಿಟ್‌ಗಳನ್ನು ಹಾಗೂ ಕೈಗವಸುಗಳನ್ನು ಖರೀದಿಸಿದ್ದೆವು. ಪ್ರತಿ ಮತಗಟ್ಟೆಗೆ 10 ಪಿಪಿಇ ಕಿಟ್‌ ಒದಗಿಸಿದ್ದೆವು. ಅವುಗಳಲ್ಲಿ ಬಹುತೇಕವು ಬಳಕೆ ಆಗಿಲ್ಲ. ಪಿಪಿಇ ಕಿಟ್‌ಗಳನ್ನು, ಉಷ್ಣತಾ ಮಾಪಕಗಳನ್ನು ಹಾಗೂ ಕೈಗವಸುಗಳನ್ನು ನಗರದಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಬಳಸಲಿದ್ದೇವೆ’ ಎಂದು ವಿಶೇಷ ಆಯುಕ್ತ ಜೆ.ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.