ADVERTISEMENT

ಕೋವಿಡ್‌ ಆರೈಕೆ ಕೇಂದ್ರ: 600 ಮಂದಿಯಷ್ಟೇ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 21:54 IST
Last Updated 30 ಜೂನ್ 2020, 21:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರಗಳಿಗೆ ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಇನ್ನೂ ಆಮೆಗತಿಯಲ್ಲೇ ಸಾಗುತ್ತಿದೆ. ಮಂಗಳವಾರದವರೆಗೆ 600 ಸೋಂಕಿತರನ್ನು ಮಾತ್ರ ಸ್ಥಳಾಂತರಿಸಲಾಗಿದೆ.

ನಗರದಲ್ಲಿ ನಾಲ್ಕು ದಿನಗಳಲ್ಲಿ 3 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹಾಗಾಗಿ ಆರೈಕೆ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಸಿಗೆ ಸೌಲಭ್ಯವನ್ನು ಸಜ್ಜುಗೊಳಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಜಿಕೆವಿಕೆ ಪ್ರಾಂಗಣದ ಹಾಸ್ಟೆಲ್‌ನಲ್ಲಿ ಆರಂಭಿಸಿರುವ ಆರೈಕೆ ಕೇಂದ್ರದಲ್ಲಿ ಮಂಗಳವಾರದಿಂದ ಸೋಂಕಿತರಿಗೆ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಿದ್ದರು. ಆದರೆ ಇದು ಸಾಧ್ಯವಾಗಿಲ್ಲ. ಈ ಹಾಸ್ಟೆಲ್‌ ಅನ್ನು ಆರೈಕೆ ಕೇಂದ್ರವನ್ನಾಗಿ ಮಾರ್ಪಾಡು ಮಾಡಲು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು.

‘ಸದ್ಯ ಹಜ್‌ ಭವನ ಹಾಗೂ ಶ್ರೀಶ್ರೀ ರವಿಶಂಕರ್‌ ಗುರೂಜಿ ಆಯುರ್ವೇದ ಆಸ್ಪತ್ರೆಯ ಆರೈಕೆ ಕೇಂದ್ರಗಳಿಗಷ್ಟೇ ಸೋಂಕಿತರನ್ನು ರವಾನಿಸಲಾಗಿದೆ. ಅಲ್ಲಿನ ಹಾಸಿಗೆಗಳು ಭರ್ತಿಯಾಗಿವೆ. ಜಿಕೆವಿಕೆ ಪ್ರಾಂಗಣದ ಹಾಸ್ಟೆಲ್‌ನಲ್ಲಿ 700 ಹಾಸಿಗೆ ಸಜ್ಜಾಗಿದೆ. ಬುಧವಾರ ಸುಮಾರು ಒಂದೂವರೆ ಸಾವಿರದಷ್ಟು ಹಾಸಿಗೆಗಳು ವಿವಿಧ ಆರೈಕೆ ಕೇಂದ್ರಗಳಲ್ಲಿ ಲಭಿಸಲಿವೆ’ ಎಂದು ಈ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜೇಂದರ್‌ ಕುಮಾರ್‌ ಕಟಾರಿಯಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘1,351 ಮಂದಿ ಚಿಕಿತ್ಸೆಗೆ ಸೌಕರ್ಯ ಲಭ್ಯ’
‘ನಗರದಲ್ಲಿ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1,351 ಮಂದಿಗೆ ಚಿಕಿತ್ಸೆ ನೀಡುವಷ್ಟು ಸೌಕರ್ಯ ಈಗಲೂ ಲಭ್ಯ ಇದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಒಟ್ಟು 2,889 ಹಾಸಿಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅವುಗಳಲ್ಲಿ 1,534 ಹಾಸಿಗೆಗಳು ಭರ್ತಿಯಾಗಿವೆ’ ಎಂದರು.

ಬಿಬಿಎಂಪಿ ಸೋಮವಾರ ಸಿದ್ಧಪಡಿಸಿದ ಪಟ್ಟಿಯ ಪ್ರಕಾರ 27 ಖಾಸಗಿ ಆಸ್ಪತ್ರೆಗಳಲ್ಲಿ 1118 ಹಾಸಿಗೆಗಳು ಕೋವಿಡ್‌ ಚಿಕಿತ್ಸೆಗೆ ಲಭ್ಯ ಇದ್ದವು. ಆದರೆ ಮಂಗಳವಾರದ ಪರಿಷ್ಕೃತ ಪಟ್ಟಿಯ ಪ್ರಕಾರ ಎರಡು ಖಾಸಗಿ ಆಸ್ಪತ್ರೆಗಳಲ್ಲಿ 36 ಹಾಸಿಗೆಗಳು ಮಾತ್ರ ಲಭ್ಯ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.