ಕೆಂಗೇರಿ: ಅವೈಜ್ಞಾನಿಕ ಕಾಮಗಾರಿಯಿಂದಾಗಿ ದೊಡ್ಡಬಿದರಕಲ್ಲು ವಾರ್ಡ್‌ನ ಹಲವೆಡೆ ಮಳೆ ನೀರು, ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ. ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ, ಸ್ಥಳೀಯ ಶಾಸಕ ಎಸ್ .ಟಿ.ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಿದರಕಲ್ಲು ವಾರ್ಡ್‌ನ ಗೋಪಾಲಪ್ಪ ಬಡಾವಣೆ ಹಾಗೂ ಮಾರಣ್ಣ ಬಡಾವಣೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ರಸ್ತೆ ಅಗೆದು ಕಾಮಗಾರಿ ಮಾಡಲಾಗುತ್ತಿದೆ. ನೀರು ಸರಾಗವಾಗಿ ಮುಂದೆ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನೇ ಮಾಡಿಲ್ಲ. ಮುಂಗಾರು ಆರಂಭವಾಗಿದ್ದು, ಜೋರು ಮಳೆಯಾಗಿ ಮನೆಗಳಿಗೆ ನೀರು ನುಗುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲಿನ ಅಧಿಕಾರಿಗಳು ಹಾಗೂ ಶಾಸಕರಿಗೆ ಇಲ್ಲವೇ ಎಂದು ಪ್ರಶ್ನಿಸಿದರು.
ತಮಗೆ ಮತ ಹಾಕುವ ಭಾಗದಲ್ಲಿ ಮಾತ್ರ ಶಾಸಕ ಎಸ್.ಟಿ.ಸೋಮಶೇಖರ್ ಅಭಿವೃದ್ದಿ ಮಾಡುತ್ತಾರೆ. ಹೀಗಾಗಿಯೇ ಕೆಲ ಬಡಾವಣೆಗಳ ಅಭಿವೃದ್ಧಿಯನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟಿದ್ದಾರೆ. ಮತ ಹಾಕಿದವರಿಗೆ ಮಾತ್ರ ಇವರು ಶಾಸಕರೆ ಎಂದು ಕೇಳಿದರು.
‘ಇಲ್ಲಿನ ಶಾಸಕರು ಸರ್ಕಾರಿ ನಿಯಮಗಳನ್ನು ಪಾಲಿಸದೆ ತಮ್ಮ ಸಂಬಂಧಿಕರಿಗೆ ಹಾಗೂ ತಮ್ಮ ಹಿಂಬಾಲಕರಿಗೆ ಗುತ್ತಿಗೆ ನೀಡಿ ಅಕ್ರಮ ಹಣ ಗಳಿಕೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆಯಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಮೂಲ ಸೌಕರ್ಯಗಳಿಲ್ಲದೆ ಸೊರಗುವಂತಾಗಿದೆ’ ಎಂದು ದೂರಿದರು.
ನಂತರ ಅಲ್ಲಿಂದಲೇ, ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ, ಕಾಮಗಾರಿ ಸ್ಥಳದಲ್ಲಿ ಗುತ್ತಿಗೆದಾರರ ಹೆಸರು ಹಾಗೂ ಕಾಮಗಾರಿಯ ವಿವರ ನಮೂದಿಸುವಂತೆ ತಾಕೀತು ಮಾಡಿದರು.
ಜೆಡಿಎಸ್ ಮುಖಂಡರಾದ ಟ್ರಾವೆಲ್ಸ್ ಮಂಜು, ಬೈರೇಗೌಡ, ವಿಜಯ್ ಕುಮಾರ್, ಪುನೀತ್, ಜಯಣ್ಣ, ಮಾರುತಿ, ಚಂದ್ರಣ್ಣ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.