ADVERTISEMENT

ಬೆಂಗಳೂರು: ಅವ್ಯವಸ್ಥೆಯ ಆಗರ ತೆರೆದ ವ್ಯಾಯಾಮ ಕೇಂದ್ರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 14:14 IST
Last Updated 9 ಜುಲೈ 2025, 14:14 IST
 ವಿದ್ಯುತ್ ಸ್ವೀಚ್ ಬಾಕ್ಸ್‌ನಿಂದ ಫ್ಯೂಸ್ ಕಿತ್ತುಕೊಂಡು ಹೋಗಿರುವುದು
 ವಿದ್ಯುತ್ ಸ್ವೀಚ್ ಬಾಕ್ಸ್‌ನಿಂದ ಫ್ಯೂಸ್ ಕಿತ್ತುಕೊಂಡು ಹೋಗಿರುವುದು   

ರಾಜರಾಜೇಶ್ವರಿನಗರ: ಸೈಕಲ್ ಪೆಡಲ್‌ಗಳು ಮುರಿದು ಹೋಗಿವೆ, ವಿದ್ಯುತ್  ದೀಪಗಳು ಹಾಳಾಗಿವೆ, ವ್ಯಾಯಾಮ ಮಾಡುವ ಪರಿಕರಗಳು ಹಾಳಾಗಿವೆ. ಕುಡುಕರ ಹಾವಳಿಯಿಂದ ಜನರು ವಿಹರಿಸುವುದೇ ಕಷ್ಟವಾಗಿದೆ..!

ಜ್ಞಾನಭಾರತಿ ಬಡಾವಣೆಯ 4ನೇ ಹಂತದಲ್ಲಿರುವ ಉದ್ಯಾನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಳವಡಿಸಿರುವ ತೆರೆದ ವ್ಯಾಯಾಮ ಕೇಂದ್ರದ (ಓಪನ್ ಜಿಮ್‌) ಸ್ಥಿತಿ ಇದು.

ನಾಗದೇವನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ  ಸೈಕಲ್‌ನ ಪೆಡಲ್‌ಗಳು ಮುರಿದು ಹೋಗಿವೆ. ವಿವಿಧ ರೀತಿಯ ವ್ಯಾಯಾಮ ಮಾಡುವ ಪರಿಕರಗಳು ಹಾಳಾಗಿವೆ. ವಿದ್ಯುತ್ ಸಂಪರ್ಕಕಲ್ಪಿಸುವ ಸ್ವಿಚ್ ಬಾಕ್ಸ್ ಕಿತ್ತುಹೋಗಿದೆ. ಕಿಡಿಗೇಡಿಗಳು ಸ್ವಿಚ್ ಬಾಕ್ಸ್‌ನಲ್ಲಿನ ಫ್ಯೂಸ್‌ಗಳನ್ನು ಕಳ್ಳತನ ಮಾಡಿದ್ದಾರೆ. ಮಕ್ಕಳು ಆಟವಾಡುವಾಗ ವಿದ್ಯುತ್ ತಗುಲಿದರೆ ಅಪಾಯ ಗ್ಯಾರಂಟಿ ಎಂದು ವಾಯು ವಿಹಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ADVERTISEMENT

‘ಪಾರ್ಕ್‌ನಲ್ಲಿ ದೀಪಗಳಿಲ್ಲ. ಮುಂಜಾನೆ ಹಾಗೂ ಇಳಿ ಸಂಜೆಯಲ್ಲಿ ವಿಹಾರ ಮಾಡುವುದಕ್ಕೆ ಭಯವಾಗುತ್ತದೆ. ಕೆಲವು ಪುಂಡರು ಇಲ್ಲಿಗೆ ಬಂದು ಮದ್ಯ ಸೇವನೆ ಮಾಡುತ್ತಾರೆ. ಕೂಗಾಡುತ್ತಾರೆ. ಅವರನ್ನು ಪ್ರಶ್ನಿಸಿದರೆ ಬಾಯಿಗೆ ಬಂದಂತೆ ಬೈಯ್ಯುತ್ತಾರೆ’ ಎಂದು ಸ್ಥಳೀಯ ನಿವಾಸಿ ನಾಗರತ್ನಾ ಬೇಸರ ವ್ಯಕ್ತಪಡಿಸಿದರು.

‘ವ್ಯಾಯಾಮ ಮಾಡುವ ಉಪಕರಣಗಳು ಮುರಿದು ಹೋಗಿ 10 ತಿಂಗಳಾದರೂ, ಬಿಬಿಎಂಪಿ ಅಧಿಕಾರಿಗಳು ಇವುಗಳನ್ನು ಸರಿಪಡಿಸುವ ಪ್ರಯತ್ನ ಮಾಡಿಲ್ಲ. ಮತ್ತೊಂದೆಡೆ ಉದ್ಯಾನದಲ್ಲಿ ಗಿಡ–ಗಂಟಿಗಳು ಹರಡಿಕೊಂಡಿವೆ. ಒಣಗಿದ ಕೊಂಬೆ, ತರಗೆಲೆ ಬಿದ್ದು ಕಸ ತುಂಬಿಕೊಂಡಿದೆ. ಆದರೂ ಇವುಗಳನ್ನು ತೆರವುಗೊಳಿಸಿಲ್ಲ’ ಎಂದು ಸ್ಥಳೀಯರು ದೂರಿದರು.

‘ಬಿಬಿಎಂ ಮುಖ್ಯ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳು ಉದ್ಯಾನಕ್ಕೆ ಭೇಟಿ ನೀಡಿ ಜಿಮ್ ಪರಿಕರಗಳನ್ನು ಪರಿಶೀಲಿಸಬೇಕು. ಹಾಳಾಗಿರುವ ಪರಿಕರಗಳನ್ನು ದುರಸ್ತಿಗೊಳಿಸಬೇಕು. ಉದ್ಯಾನದಲ್ಲಿ ಗಲಾಟೆ ಮಾಡುವವರನ್ನು ನಿಯಂತ್ರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.

ವ್ಯಾಯಾಮ ಪರಿಕರಗಳು ಹಾಳಾಗಿರುವುದು
ಪಾರ್ಕ್ ಒಳಗೆ ಬಿದ್ದಿರುವ ಒಣಗಿದ ಮರದ ಕೊಂಬೆಯ ಎಲೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.