ಬೆಂಗಳೂರು: ತ್ಯಾಜ್ಯ ನೀರನ್ನು 11 ಹಂತಗಳಲ್ಲಿ ಶುದ್ಧೀಕರಿಸಿ ಕುಡಿಯಲು ಹೊರತುಪಡಿಸಿ, ಇತರೆ ಉದ್ದೇಶಗಳಿಗೆ ಬಳಸುವ ಮೂಲಕ ಆದಾಯ ಗಳಿಸಲು ಜಲಮಂಡಳಿ ಕಾರ್ಯ ಪ್ರವೃತ್ತವಾಗಿದೆ.
ನಗರದಲ್ಲಿ ನಿತ್ಯ 70 ಸಾವಿರ ಲೀಟರ್ ತ್ಯಾಜ್ಯ ನೀರಿನ ಸಂಸ್ಕರಣೆ ಕಾರ್ಯ ಆರಂಭವಾಗಿದ್ದು, 24 ಸಾವಿರ ಲೀಟರ್ ನೀರನ್ನು ಮಾರಾಟ ಮಾಡಲಾಗುತ್ತಿದೆ.
ಅನ್ಯ ಬಳಕೆಗೆ ಸಿಹಿನೀರಿನ ಮೇಲಿನ ಅವಲಂಬನೆ ತಪ್ಪಿಸಿ ಆರ್ಥಿಕ ಹೊರೆ ತಗ್ಗಿಸುವುದು, ತ್ಯಾಜ್ಯ ನೀರು ಅನಗತ್ಯವಾಗಿ ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರುವುದನ್ನು ತಪ್ಪಿಸಲು ತ್ಯಾಜ್ಯ ನೀರು ಸಂಸ್ಕರಣೆಗೆ ನವೋದ್ಯಮಗಳನ್ನು ಬಳಸಿಕೊಳ್ಳಲು ಜಲಮಂಡಳಿ ಮುಂದಾಗಿದೆ.
ಮೊದಲ ಹಂತದಲ್ಲಿ ಆರಂಭವಾಗಿರುವ ಯೋಜನೆಯಲ್ಲಿ ಜಲಮಂಡಳಿಯಿಂದ ಯಾವುದೇ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ, ಬೆಂಗಳೂರಿನ ಬೋಸನ್ ವೈಟ್‌ವಾಟರ್ ಎಂಬ ನವೋದ್ಯಮ ₹50 ಲಕ್ಷ ಅನುದಾನದಲ್ಲಿ ಅತ್ಯಾಧುನಿಕ ಶುದ್ಧೀಕರಣ ಯಂತ್ರೋಪಕರಣಗಳನ್ನು ಬಳಸಿ ಪ್ರಯೋಗವನ್ನು ಆರಂಭಿಸಿದೆ.
ಜಲಮಂಡಳಿಯು ಕಚ್ಚಾವಸ್ತುವಾಗಿ ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕದ ಮೂಲಕ ನೀಡಲಿದೆ. ಆ ನಂತರ ಸಂಸ್ಕರಿಸಿದ ನೀರಿನ ಮಾರಾಟಕ್ಕೆ ಬೇಕಾದ ಸಂಪರ್ಕ ವ್ಯವಸ್ಥೆಗೆ ಸಹಾಯ ಮಾಡಲಿದೆ.
ಇದರ ಸಾಧಕ–ಬಾಧಕಗಳನ್ನು ನೋಡಿಕೊಂಡು ಇನ್ನೂ 10 ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಇದನ್ನು ವಿಸ್ತರಿಸಲಾಗುತ್ತದೆ.
ಈ ಪ್ರಯೋಗಗಳ ಫಲಿತಾಂಶ, ಉದ್ಯಮ ವಲಯದಿಂದ ಶುದ್ದೀಕರಿಸಿದ ನೀರಿನ ಬೇಡಿಕೆ ನೋಡಿಕೊಂಡು ಹಂತ ಹಂತವಾಗಿ ಮೂರು ವರ್ಷದಲ್ಲಿ 500 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಲಾಗುತ್ತದೆ. ತ್ಯಾಜ್ಯ ನೀರಿನಿಂದ ಕನಿಷ್ಠ ₹100 ಕೋಟಿ ಆದಾಯ ಗಳಿಸುವ ಯೋಜನೆ ರೂಪಿಸಲಾಗುತ್ತಿದೆ.
ಬೆಂಗಳೂರಿನ ಹಾದಿ:
ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿದ್ದು, ಆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿಗೆ ಹರಿಸಲಾಗುತ್ತಿದೆ. ತ್ಯಾಜ್ಯ ನೀರು ಕೆರೆಗಳಿಗೆ ಹರಿಸಲು ಯೋಗ್ಯವಾಗಿಲ್ಲ. ಶೌಚಾಲಯಗಳಲ್ಲಿ ಫ್ಲಷಿಂಗ್‌ಗೂ ಬಳಕೆ ಮಾಡುವಂತಿಲ್ಲ ಎಂದು ಪ್ರಯೋಗಾಲಯಗಳಿಂದ ಬಂದಿರುವ ವರದಿ ಆಧರಿಸಿ ಜಲಮಂಡಳಿ ಪರ್ಯಾಯ ಮಾರ್ಗಗಳನ್ನು ರೂಪಿಸಿಕೊಂಡಿದೆ.
ನಗರದಲ್ಲಿ ಹಲವು ಸಂಸ್ಥೆಗಳು ಸಣ್ಣ ಪ್ರಮಾಣದಲ್ಲಿ ನೀರು ಶುದ್ದೀಕರಣ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿವೆ. ನೀರು ಶುದ್ಧೀಕರಣ ತಂತ್ರಜ್ಞಾನಗಳು ಹೆಚ್ಚಿದ ನಂತರ ಕೆಲ ಕಂಪನಿಗಳು ಈಗ ನವೋದ್ಯಮ ರೂಪದಲ್ಲಿ ಪ್ರವೇಶಿಸಿವೆ. ಅಪಾರ್ಟ್‌ಮೆಂಟ್ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಆರಂಭಿಸಿ ಅಲ್ಲಿನ ಉದ್ಯಾನ, ಈಜುಕೊಳಗಳಿಗೆ ಬಳಕೆ ಮಾಡುತ್ತಿವೆ. ಈಗ ಅವುಗಳ ಪ್ರಯೋಗ ಜಲಮಂಡಳಿ ಘಟಕಕ್ಕೂ ವಿಸ್ತರಣೆಯಾಗಿದೆ.
ಸಂಸ್ಕರಣೆಯ ವೆಚ್ಚ:
ಸದ್ಯ ನವೋದ್ಯಮ ನಡೆಸಿರುವ ಪ್ರಯೋಗದಂತೆ ನೀರು ಶುದ್ಧೀಕರಣಕ್ಕೆ ಪ್ರತಿ ಲೀಟರ್‌ಗೆ 3ರಿಂದ 4 ಪೈಸೆ ವೆಚ್ಚವಾಗಲಿದೆ. ಶುದ್ಧೀಕರಣದ ನಂತರ 15ರಿಂದ 16 ಪೈಸೆಗೆ ಮಾರಾಟ ಮಾಡಬಹುದು. ಟ್ಯಾಂಕರ್ ಮೂಲಕ ಬಳಸಿದರೆ ಲೀಟರ್‌ಗೆ 20 ಪೈಸೆ ವೆಚ್ಚವಾಗಬಹುದು. ಅಂದರೆ 12 ಸಾವಿರ ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕರ್‌ಗೆ ₹2,200 ರಿಂದ ₹2,400ವರೆಗೂ ಆದಾಯ ಬರಲಿದೆ.
ಕೊಳಚೆ ನೀರು ಶುದ್ಧೀಕರಣಗೊಳಿಸಿದ ನಂತರ ಉದ್ಯಮಗಳ ಕೂಲಿಂಗ್ ಟವರ್‌ಗಳು, ವಾಣಿಜ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿಗಳು, ಅಪಾರ್ಟ್‌ಮೆಂಟ್‌ಗಳು, ಉದ್ಯಾನ, ಈಜುಕೊಳಗಳಿಗೆ ಸರಬರಾಜು ಮಾಡಲು ಪ್ರತ್ಯೇಕ ಪೈಪ್‌ಲೈನ್ ರೂಪಿಸಿದರೆ ವೆಚ್ಚ ತಗ್ಗಬಹುದು ಎನ್ನುವ ಸಲಹೆಯನ್ನು ಜಲಮಂಡಳಿಗೆ ನೀಡಲಾಗಿದೆ.
‘ಸಂಸ್ಕರಿಸಿದ ನೀರಿನ ಬಗ್ಗೆ ಜನರಲ್ಲಿ ಭರವಸೆ ಮೂಡಿಸಿ ಮುಂದೆ ಎಸ್‌ಟಿಪಿಗಳನ್ನು ಸಂಪನ್ಮೂಲ ಘಟಕವೆಂಬ ಬ್ರ್ಯಾಂಡಿಂಗ್ ಮಾಡುವ ಭಾಗವಾಗಿಯೇ ಬೋಸನ್ ವೈಟ್‌ವಾಟರ್ ಎಂಬ ನವೋದ್ಯಮಕ್ಕೆ ಮೊದಲ ಅವಕಾಶ ನೀಡಿದ್ದೇವೆ. ನೀರಿನ ನಿರ್ವಹಣೆ, ಮರುಬಳಕೆ ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಆಸಕ್ತಿ ಇರುವ ನವೋದ್ಯಮ ಕಂಪನಿಗಳು ಮುಂದೆ ಬಂದರೆ ಪ್ರಾಯೋಗಿಕ ರೂಪದಲ್ಲಿ ಸಂಸ್ಕರಣೆಗೆ ಅವಕಾಶ ಮಾಡಿಕೊಡುತ್ತೇವೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
11 ಹಂತದಲ್ಲಿ ಶುದ್ಧೀಕರಣ
50 ಎಂಎಲ್‌ಡಿ ಸಾಮರ್ಥ್ಯದ ಕಾಡುಬೀಸನಹಳ್ಳಿ ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರನ್ನು ಪಡೆಯುವ ಬೋಸಾನ್ ವೈಟ್‌ವಾಟರ್ ಸಂಸ್ಥೆ 11 ಹಂತದಲ್ಲಿ ಶುದ್ಧೀಕರಿಸುತ್ತಿದೆ. ಇದಕ್ಕಾಗಿಯೇ ಯಂತ್ರೋಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ(ಎನ್‌ಎಬಿಎಲ್) ನೀರಿನ ಶುದ್ಧತೆ ಪ್ರಮಾಣೀಕರಿಸಲಿದೆ. ‘3 ತಿಂಗಳಿನಿಂದ ಜಲಮಂಡಳಿ ಘಟಕದಲ್ಲಿ ಪ್ರಯೋಗ ನಡೆದರೂ ಈಗ ಅಧಿಕೃತ ಚಟುವಟಿಕೆ ಶುರುವಾಗಿದೆ. ನೀರನ್ನು ಆಟೋಮೇಷನ್ ತಂತ್ರಜ್ಞಾನ ಬಳಸಿ ಶುದ್ಧೀಕರಣ ಮಾಡಲಾಗುತ್ತದೆ. ಇದು ಕುಡಿಯುವುದಕ್ಕಿಂತ ಉದ್ಯಮಗಳ ಕೂಲಿಂಗ್ ಸಹಿತ ಕಟ್ಟಡಗಳಿಗೆ ಬಳಸಲು ಯೋಗ್ಯ’ ಎಂದು ಬೋಸಾನ್ ವೈಟ್‌ವಾಟರ್ ನವೋದ್ಯಮ ಸಂಸ್ಥಾಪಕ ಗೌತಮ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.