ಬೆಂಗಳೂರು: ಮೆಟ್ರೊ ಪ್ರಯಾಣ ದರ ಏರಿಕೆ ವಿರೋಧಿಸಿ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ನಿರ್ಮಾಣವಾಗಿರುವ ‘ನಮ್ಮ ಮೆಟ್ರೊ’ ಖಾಸಗಿ ಅಥವಾ ಕಾರ್ಪೊರೇಟ್ ಉದ್ದಿಮೆಯಲ್ಲ. ಲಾಭ, ನಷ್ಟದ ಲೆಕ್ಕಾಚಾರ ಮಾಡಿ, ಪ್ರಯಾಣ ದರ ಏರಿಕೆ ಮಾಡಬಾರದು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಎಸ್‌ಯುಸಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎನ್.ರವಿ ಮಾತನಾಡಿ, ‘ನಮ್ಮ ಮೆಟ್ರೊ’ಗಾಗಿ ಕೆಲವು ವರ್ಷಗಳಿಂದ ಜನರ ಮೇಲೆ ತೆರಿಗೆ ವಿಧಿಸಲಾಗಿದೆ. ಇದೀಗ, ಪ್ರಯಾಣ ದರ ಏರಿಸುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.
ಮೆಟ್ರೊ ಪ್ರಯಾಣ ದರ ಹೆಚ್ಚಳದಿಂದ ಸಾಮಾನ್ಯ ಜನರಿಗೆ ತಿಂಗಳಿಗೆ ಸರಾಸರಿ ₹400 ರಿಂದ ₹450ರವರೆಗೆ ಹೆಚ್ಚಿನ ಹೊರೆಯಾಗುತ್ತದೆ. ಈಗಾಗಲೇ ಬಸ್ ದರ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ, ಮೆಟ್ರೊ ಪ್ರಯಾಣ ದರ ಏರಿಕೆ ಮಾಡದಂತೆ ತಡೆಯಬೇಕು’ ಎಂದು ಆಗ್ರಹಿಸಿದರು.
‘ನಮ್ಮ ಮೆಟ್ರೊ’ ಸಾರ್ವಜನಿಕ ಸಾರಿಗೆ. ಲಾಭ ಮತ್ತು ನಷ್ಟದ ಆಧಾರದ ಮೇಲೆ ಅದು ಕಾರ್ಯನಿರ್ವಹಿಸಬಾರದು. ಸಾರ್ವಜನಿಕರಿಗೆ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಸೇವೆಯನ್ನು ನೀಡುವುದೇ ನಮ್ಮ ಮೆಟ್ರೊ ಗುರಿಯಾಗಬೇಕು' ಎಂದು ಸಲಹೆ ನೀಡಿದರು.
ಎಸ್‌ಯುಸಿಐ(ಕಮ್ಯುನಿಸ್ಟ್) ಜಿಲ್ಲಾ ಸಮಿತಿ ಸದಸ್ಯ ಜಯಣ್ಣ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.