ADVERTISEMENT

ಸಸ್ಯಕಾಶಿಯಲ್ಲಿ ಅವತರಿಸಿದ ಆರ್ಕಿಡ್ ಲೋಕ

ಹೂವಿನ ಅಂದಕ್ಕೆ ಮನಸೋತ ಜನತೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 18:51 IST
Last Updated 19 ಅಕ್ಟೋಬರ್ 2019, 18:51 IST
ಪ್ರದರ್ಶನದಲ್ಲಿದ್ದ ಆರ್ಕಿಡ್‌ ಹೂವುಗಳನ್ನು ಯುವತಿಯರು ಕುತೂಹಲದಿಂದ ವೀಕ್ಷಿಸಿದರು – ಪ್ರಜಾವಾಣಿ ಚಿತ್ರ
ಪ್ರದರ್ಶನದಲ್ಲಿದ್ದ ಆರ್ಕಿಡ್‌ ಹೂವುಗಳನ್ನು ಯುವತಿಯರು ಕುತೂಹಲದಿಂದ ವೀಕ್ಷಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು:ಶೀತಲ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಮೋಹಕ ಆರ್ಕಿಡ್ ಹೂವುಗಳ ಸೊಬಗು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅನಾವರಣಗೊಂಡಿದೆ. ಆರ್ಕಿಡ್‌ ವೈಭವವನ್ನು ಕಣ್ತುಂಬಿಕೊಂಡ ಜನತೆ ಬಣ್ಣ ಬಣ್ಣದ ಹೂವುಗಳ ಅಂದಕ್ಕೆ ಮಾರುಹೋದರು.

ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ, ಲಾಲ್‌ಬಾಗ್‌ನ ಡಾ.ಎಂ.ಎಚ್. ಮರಿಗೌಡ ಸಭಾಂಗಣದಲ್ಲಿ ಆಯೋಜಿಸಿರುವ 2 ದಿನಗಳ ಏಳನೇ ಆರ್ಕಿಡ್‌ ಪ್ರದರ್ಶನಕ್ಕೆ ಶನಿವಾರ ಚಾಲನೆ ಸಿಕ್ಕತು.

ಡೆಂಡ್ರೋಬಿಯಮ್ಸ್, ಪ್ಯಾಪಿಲೊ ಪೀಡಿಯಂ, ವ್ಯಾಂಡಾ, ಫಲನೊಪ್ಸಿಸ್, ಒನ್ಸಿಡಿಯಾ, ಕ್ಯಾಟ್ಲಿಯಾ ವೊಕಾರಾ ಸೇರಿದಂತೆ 45ಕ್ಕೂ ಹೆಚ್ಚು ತಳಿಗಳ ಹೂವುಗಳು ಪ್ರದರ್ಶನದಲ್ಲಿದೆ. ಹೈಬ್ರಿಡ್‌ ತಳಿಗಳ ಹೂವುಗಳು ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಪ್ರದರ್ಶನದಲ್ಲಿರುವ ಎಲ್ಲ ಹೂವುಗಳನ್ನು ಸೊಸೈಟಿಯ ಸದಸ್ಯರೇ ಬೆಳೆದಿದ್ದಾರೆ. ಬಣ್ಣ ಬಣ್ಣದ ಹೂವುಗಳಿಗೆ ಮನಸೋತ ಜನತೆ ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು.

ADVERTISEMENT

ಹೂವಿನಿಂದ ರಚಿಸಿದ ಮಂಟಪ, ಕಾಡಿನ ವಿನ್ಯಾಸ,ಆರ್ಕಿಡ್‌ ಗ್ಯಾಲರಿ, ಹಳೆಯ ಸೈಕಲ್‌ಗೆ ಹೂವಿನಿಂದ ಮಾಡಿದ್ದ ಅಲಂಕಾರ ಗಮನ ಸೆಳೆಯಿತು. ಬಿಳಿ, ಕೆಂಪು, ಹಳದಿ, ನೆರಳೆ, ನೀಲಿ, ಗುಲಾಬಿ ಸೇರಿದಂತೆ ವಿವಿಧ ಬಣ್ಣಗಳ ಹಾಗೂ ನಾನಾ ಆಕಾರಗಳ ಹೂವುಗಳಿದ್ದವು.

‘ಸದಸ್ಯರು ಬೆಳೆದ ಹೂವುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಬ್ರೆಜಿಲ್‌, ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ದೇಶಗಳ ತಳಿಗಳಿವೆ. ಇಂತಹ ಗಿಡಗಳಿಗೆ ಮೊದಲಿನಿಂದಲೂ ಬೇಡಿಕೆಯಿದೆ. ಹೂವುಗಳಿಗೂ ಉತ್ತಮ ಮಾರುಕಟ್ಟೆ ನಿರ್ಮಾಣವಾಗಿದೆ.ಗಿಡಗಳಿಗೆ ಅನುಸಾರ ದರದಲ್ಲಿ ವ್ಯತ್ಯಯ ಇರುತ್ತದೆ. ಆರ್ಕಿಡ್‌ಗಳನ್ನು ಹೂವು, ಮಾರುಕಟ್ಟೆ ದೃಷ್ಟಿಯಿಂದ ಮಾತ್ರ ನೋಡಲಾಗುತ್ತದೆ. ಕಾಡಿನಲ್ಲಿ ಆರ್ಕಿಡ್‌ ಇದೆ ಎಂದರೆ ಅಲ್ಲಿನ ನೈಸರ್ಗಿಕ ವಾತಾವರಣಕ್ಕೆ ಹಾನಿಯಾಗಿಲ್ಲ ಎಂದರ್ಥ’ ಎಂದು ಸೊಸೈಟಿ ಅಧ್ಯಕ್ಷ ಕೆ.ಎಸ್. ಶಶಿಧರ್ ತಿಳಿಸಿದರು.

ಕೇರಳ ಹಾಗೂ ತಮಿಳುನಾಡಿನ ವರ್ತಕರೂ ಪ್ರದರ್ಶನದಲ್ಲಿ ಗಿಡಗಳನ್ನು ಮಾರಾಟ ಮಾಡಿದರು. ₹100ರಿಂದ ₹10 ಸಾವಿರ ಬೆಲೆ ಬಾಳುವ ಆರ್ಕಿಡ್‌ಗಳಿದ್ದವು. ಗಿಡಗಳಿಗೆ ಬೇಕಾದ ಪೋಷಕಾಂಶಗಳನ್ನೂ ಮಾರಾಟಕ್ಕಿಡಲಾಗಿತ್ತು.

‘ಪ್ರದರ್ಶನಕ್ಕೆ ಬಂದವರು ಗಿಡಗಳ ಬಗ್ಗೆ ವಿಚಾರಿಸಿ, ಖರೀದಿಸುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಮಾರಾಟಗಾರ ಸುರೇಶ್ ಪ್ರಭು ತಿಳಿಸಿದರು.

**
ಆರ್ಕಿಡ್‌ ಹೂವುಗಳ ವೈವಿಧ್ಯತೆ ಬಗ್ಗೆ ತಿಳಿದುಕೊಂಡೆವು. ಮನೆಯಲ್ಲಿಯೇ ಸುಲಭವಾಗಿ ಬೆಳೆಯಬಹುದು ಎನ್ನುವುದು ತಿಳಿಯಿತು. ಪ್ರದರ್ಶನ ಚೆನ್ನಾಗಿ ಆಯೋಜಿಸಲಾಗಿದೆ.
-ಸತ್ಯವತಿ, ಜೆ.ಪಿ. ನಗರ

**
ಮನೆಯಲ್ಲಿ 25 ಆರ್ಕಿಡ್‌ ಗಿಡಗಳಿವೆ. ಈ ಗಿಡಗಳನ್ನು ಬೆಳೆಸಲು ತಾಳ್ಮೆ ಬೇಕಾಗುತ್ತದೆ. ಆರ್ಕಿಡ್‌ ಪುಷ್ಪದ ಬಗ್ಗೆ ಬಹುತೇಕರಿಗೆ ಮಾಹಿತಿ ಕೊರತೆ ಇತ್ತು. ಅದನ್ನು ಈ ಪ್ರದರ್ಶನ ನಿವಾರಿಸಿದೆ.
-ಜಿ.ವಿ. ನಾಗರಾಜ್, ಹೂವಿನ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.