ADVERTISEMENT

ತಿಂಗಳಲ್ಲಿ 16 ಮಂದಿ ಅಂಗಾಂಗ ದಾನ

ವರ್ಷಾರಂಭದಲ್ಲಿಯೇ ಉತ್ತಮ ಪ್ರತಿಕ್ರಿಯೆ * 22 ಮೂತ್ರಪಿಂಡಗಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 21:24 IST
Last Updated 11 ಫೆಬ್ರುವರಿ 2023, 21:24 IST
   

ಬೆಂಗಳೂರು: ಅಂಗಾಂಗ ದಾನಕ್ಕೆ ಈ ವರ್ಷ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ತಿಂಗಳೊಂದರಲ್ಲಿ 16 ಮಂದಿಯಿಂದ 76 ಅಂಗಾಂಗ ಹಾಗೂ ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ.

ಈ ಮೊದಲು ಜೀವಸಾರ್ಥಕತೆ ಹೆಸರಿನಿಂದ ನೋಂದಾಯಿತವಾಗಿದ್ದ ಸೊಟ್ಟೊ (ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ), ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮೃತ ದಾನಿಗಳಿಂದ ಅಂಗಾಂಗ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಈ ಸಂಸ್ಥೆ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ಈ ವರ್ಷ 22 ಮೂತ್ರಪಿಂಡಗಳು, 11 ಯಕೃತ್ತು ಹಾಗೂ ಎರಡು ಹೃದಯವನ್ನು ದಾನಿಗಳಿಂದ ಸಂಗ್ರಹಿಸಿದೆ. ಅದೇ ರೀತಿ ನಾಲ್ವರಿಂದ ಚರ್ಮ, ಒಂಬತ್ತು ಹೃದಯದ ಕವಾಟ ಹಾಗೂ 28 ನೇತ್ರಗಳನ್ನು ಸಂಗ್ರಹಿಸಿದೆ.

ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭಗಳಲ್ಲಿ ಗಂಭೀರವಾಗಿ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗಗಳನ್ನು ಸಂಗ್ರಹಿಸಲಾಗುತ್ತದೆ. 2020ರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದರಿಂದ ಅಂಗಾಂಗ ದಾನಕ್ಕೆ ಸಮಸ್ಯೆಯಾಗಿತ್ತು. ಆ ವರ್ಷ 35 ಹಾಗೂ 2021ರಲ್ಲಿ 70 ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದರು. 2022ರ ಮಾರ್ಚ್ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಆಗಿದ್ದರಿಂದ, ಅಂಗಾಂಗ ದಾನ ಪ್ರಮಾಣ ಏರಿಕೆ ಕಂಡಿತ್ತು. ಕಳೆದ ವರ್ಷ 151 ಮಂದಿ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅವರಿಂದ 403 ಅಂಗಾಂಗಗಳು ಹಾಗೂ 348 ಅಂಗಾಂಶಗಳನ್ನು ಸಂಗ್ರಹಿಸಲಾಗಿತ್ತು.

ADVERTISEMENT

‘ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಹೃದಯ, ಮೂತ್ರಪಿಂಡ, ಶ್ವಾಸಕೋಶ ಸೇರಿ ವಿವಿಧ ಅಂಗಾಂಗಗಳಿಂದ ಐವರಿಗೆ, ಹೃದಯದ ಕವಾಟ, ಚರ್ಮ, ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ 50 ಮಂದಿಗೆ ನೆರವಾಗಬಹುದು. ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡುತ್ತಿದೆ’ ಎಂದು ಸೊಟ್ಟೊ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.