ADVERTISEMENT

Organ Donation: ಅಂಗಾಂಗ ದಾನಕ್ಕೆ ಕುಟುಂಬಸ್ಥರಿಂದಲೇ ಅಡ್ಡಿ!

ವರುಣ ಹೆಗಡೆ
Published 28 ಏಪ್ರಿಲ್ 2025, 0:32 IST
Last Updated 28 ಏಪ್ರಿಲ್ 2025, 0:32 IST
   

ಬೆಂಗಳೂರು: ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಅಂಗಾಂಗ ದಾನಕ್ಕೆ ಹೆಚ್ಚಿನ ಕುಟುಂಬಗಳು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಅಂಗಾಂಗ ದಾನಕ್ಕೆ ಮೃತ ವ್ಯಕ್ತಿ ಹೆಸರು ನೋಂದಾಯಿಸಿದ್ದರೂ ಸಾವಿನ ಬಳಿಕ ಇನ್ನಷ್ಟು ಜೀವಗಳಿಗೆ ನೆರವಾಗುವ ಪ್ರತಿಜ್ಞೆ ಸಾಕಾರವಾಗುತ್ತಿಲ್ಲ. 

ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಜತೆಗೆ ವಿವಿಧ ಸರ್ಕಾರೇತರ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಕೂಡ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಅಂಗಾಂಗ ದಾನದ ಪ್ರಕ್ರಿಯೆ ಪ್ರೋತ್ಸಾಹಿಸಲು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ನೊಟ್ಟೊ) ಹಾಗೂ ರಾಜ್ಯ ಮಟ್ಟದಲ್ಲಿ ಜೀವಸಾರ್ಥಕತೆ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಅಂಗಾಂಗ ದಾನದ ಬಗ್ಗೆ ಪ್ರತಿಜ್ಞೆ ಕೈಗೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ನೊಟ್ಟೊ ಅಡಿ 36 ಸಾವಿರಕ್ಕೂ ಅಧಿಕ ಮಂದಿ ಅಂಗಾಂಗ ದಾನದ ಪ್ರತಿಜ್ಞೆ ಕೈಗೊಂಡರೆ, ಜೀವಸಾರ್ಥಕತೆಯಡಿ 43 ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದಾರೆ. ಆದರೆ, ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ನಿಗದಿತ ವೈದ್ಯಕೀಯ ಸಂಸ್ಥೆಗಳಿಗೆ ಕುಟುಂಬಸ್ಥರು ಮಾಹಿತಿ ನೀಡದಿರುವುದು, ಮೂಢನಂಬಿಕೆ, ಅರಿವಿನ ಕೊರತೆ ಸೇರಿ ವಿವಿಧ ಕಾರಣದಿಂದ ಅಂಗಾಂಗ ದಾನ ಸಾಧ್ಯವಾಗುತ್ತಿಲ್ಲ. 

ಮಾನವ ಅಂಗಾಂಗ ದಾನ ಕಸಿ ಕಾಯ್ದೆ 1994 ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಇದು ಕಾನೂನುಬದ್ಧವಾಗಿದೆ. ರಾಜ್ಯದಲ್ಲಿ 2007 ರಿಂದ ಜೀವಸಾರ್ಥಕತೆಯಡಿ ಅಂಗಾಂಗ ದಾನ ಹಾಗೂ ಅಂಗಾಂಗ ಕಸಿಗೆ ಉತ್ತೇಜನ ನೀಡಲಾಗುತ್ತಿದೆ. ರಾಜ್ಯದಲ್ಲಿ ಐದು ವರ್ಷಗಳಲ್ಲಿ 619 ವ್ಯಕ್ತಿಗಳಿಂದ ಮಾತ್ರ ಜೀವಸಾರ್ಥಕತೆಯಡಿ ಅಂಗಾಂಗಳನ್ನು ಸ್ವೀಕರಿಸಲಾಗಿದೆ.

ADVERTISEMENT

ದಾನಕ್ಕೆ ಉತ್ತೇಜನ:

ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ, ಅಂಗಾಂಗಕ್ಕಾಗಿ ಎದುರುನೋಡುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಯಿಂದ ಚೇತರಿಸಿಕೊಳ್ಳದೆ ಮೃತಪಟ್ಟವರ ಕುಟುಂಬಸ್ಥರಿಗೆ ವೈದ್ಯರು ಅಂಗಾಂಗ ದಾನದ ಬಗ್ಗೆ ಮನವರಿಕೆ ಮಾಡಿಸುತ್ತಿದ್ದಾರೆ. ಮೃತರಿಂದ ಪಡೆದ ಅಂಗಾಂಗಗಳನ್ನು ಜೀವಸಾರ್ಥಕತೆಯಡಿ ಹೆಸರು ನೋಂದಾಯಿಸಿದವರಿಗೆ ಕಸಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದ್ದು, ಅಂಗಾಂಗ ದಾನಿಗಳ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರಶಂಸನಾ ಪತ್ರಗಳನ್ನು ನೀಡಲಾಗುತ್ತಿದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಗೌರವಿಸಲಾಗುತ್ತಿದೆ.

‘ಅಂಗಾಂಗ ದಾನದ ಬಗ್ಗೆ ಪ್ರತಿಜ್ಞೆ ಕೈಗೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ, ಅಂಗಾಂಗ ದಾನ ಪ್ರಕ್ರಿಯೆ ಗಣನೀಯವಾಗಿ ಏರಿಕೆಯಾಗಿಲ್ಲ. ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಬೇಕಿದೆ. ಮಾಹಿತಿ ಕೊರತೆ, ದೇಹ ವಿರೂಪಗೊಳ್ಳುವ ಬಗ್ಗೆ ತಪ್ಪು ಕಲ್ಪನೆ, ಮೂಢನಂಬಿಕೆ ಸೇರಿ ವಿವಿಧ ಕಾರಣದಿಂದ ಕುಟುಂಬಸ್ಥರು ಹಿಂದೇಟು ಹಾಕುತ್ತಾರೆ. ಇಷ್ಟಾಗಿಯೂ ಇತ್ತೀಚಿನ ವರ್ಷಗಳಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಏರಿಕೆ ಕಂಡಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಹಲವು ಮಂದಿಗೆ ನೆರವು

ಜೀವಸಾರ್ಥಕತೆ ಸಂಸ್ಥೆ ಪ್ರಕಾರ ಒಬ್ಬ ದಾನಿಯು ಹೃದಯ ಮೂತ್ರಪಿಂಡ ಶ್ವಾಸಕೋಶ ಯಕೃತ್ತು ಸಣ್ಣ ಕರುಳು ಹಾಗೂ ಮೇದೋಜೀರಕ ಗ್ರಂಥಿ ದಾನದ ಮೂಲಕ ಎಂಟು ಜೀವಗಳಿಗೆ ಹೃದಯದ ಕವಾಟ ಚರ್ಮ ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ ಹಲವು ಮಂದಿಗೆ ನೆರವಾಗಬಹುದು. ಅಂಗಾಂಗ ದಾನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. 

ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು. ವೈದ್ಯಕೀಯ ತಂತ್ರಜ್ಞಾನಗಳ ಪ್ರಗತಿಯೊಂದಿಗೆ ಜೀವ ಉಳಿಸುವ ಅಂಗಾಂಗಗಳಿಗೆ ಬೇಡಿಕೆ ಹೆಚ್ಚಿದೆ
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.