ADVERTISEMENT

ಅಂಗಾಂಗ ದಾನ: ಕ್ಯೂಆರ್ ಕೋಡ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 15:58 IST
Last Updated 5 ಅಕ್ಟೋಬರ್ 2023, 15:58 IST
ಅಂಗಾಂಗ ದಾನ ಪ್ರತಿಜ್ಞೆಗೆ ಕ್ಯೂಆರ್‌ ಕೋಡ್
ಅಂಗಾಂಗ ದಾನ ಪ್ರತಿಜ್ಞೆಗೆ ಕ್ಯೂಆರ್‌ ಕೋಡ್   

ಬೆಂಗಳೂರು: ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ದಾನಿಗಳ ಸಂಖ್ಯೆ ಹೆಚ್ಚಿಸಲು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(ನೊಟ್ಟೊ) ಅಭಿವೃದ್ಧಿಪಡಿಸಿರುವ ಕ್ಯೂಆರ್‌ ಕೋಡ್‌ಗೆ ಗುರುವಾರ ಚಾಲನೆ ದೊರೆತಿದೆ. 

ಆರೋಗ್ಯ ಇಲಾಖೆ ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಂಗಾಂಗ ದಾನ ಪ್ರತಿಜ್ಞೆ ಕೈಗೊಂಡರು. ಈ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಪ್ರತಿಜ್ಞೆ ಕೈಗೊಳ್ಳುವ ಪುಟ ತೆರೆದುಕೊಳ್ಳಲಿದೆ. ಅಲ್ಲಿ ಆಧಾರ್ ಸಂಖ್ಯೆ ಸಹಿತ ಅಗತ್ಯ ಮಾಹಿತಿ ನಮೂದಿಸಬೇಕು. 

‘ಆಯುಷ್ಮಾನ್ ಭವ ಡಿಜಿಟಲ್‌ ಮಿಷನ್‌ ಅಡಿ ಈ ಕ್ಯೂಆರ್‌ ಕೋಡ್ ಅಭಿವೃದ್ಧಿಪಡಿಸಲಾಗಿದೆ. ಆಯುಷ್ಮಾನ್‌ ಭವ ಆರೋಗ್ಯ ಮೇಳದಲ್ಲಿ ಅಂಗಾಂಗ ದಾನದ ಮಹತ್ವವನ್ನು ಸಾರಲಾಗುತ್ತದೆ. ರಾಜ್ಯದ ಜೀವಸಾರ್ಥಕತೆ ಯೋಜನೆಯಡಿ ಒಟ್ಟು 35 ಸಾವಿರಕ್ಕೂ ಹೆಚ್ವು ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಅಂಗಾಂಗ ದಾನಕ್ಕೆ ಪ್ರತಿಜ್ಞೆ ಕೈಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬದಲಾದ ಜೀವನ ಶೈಲಿಯಿಂದಾಗಿ ಮೂತ್ರಪಿಂಡ, ಯಕೃತ್ತು, ಹೃದಯ ಸೇರಿ ವಿವಿಧ ಅಂಗಾಂಗಗಳ ಕಸಿಗೆ 7 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ADVERTISEMENT

‘ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಕೂಡಾ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಬೇಕು’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.