ದಾಬಸ್ ಪೇಟೆ: ರೈತರು ತಮ್ಮ ಜಮೀನಿನ ಮಣ್ಣನ್ನು ಎರಡು ಮೂರು ವರ್ಷಕ್ಕೆ ಒಂದು ಸಲ ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಮಣ್ಣಿನಲ್ಲಿ ಏನಾದರೂ ನ್ಯೂನತೆಗಳಿವೆಯೇ ಎನ್ನುವುದನ್ನು ತಿಳಿದು, ಪೋಷಕಾಂಶ ನೀಡಲು ಸಹಾಯಕವಾಗುತ್ತದೆ ಎಂದು ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕ ಸುರೇಶ್ ತಿಳಿಸಿದರು
ನೆಲಮಂಗಲ ತಾಲ್ಲೂಕು ಕೃಷಿ ಇಲಾಖೆ ವತಿಯಿಂದ ನಿಜಗಲ್ ಕೆಂಪೋಹಳ್ಳಿಯಲ್ಲಿ ನಡೆದ 2024-2 5ನೇ ಸಾಲಿನ 'ತಾಲ್ಲೂಕು ಮಟ್ಟದ ವಿಶ್ವ ಮಣ್ಣು ದಿನಾಚರಣೆ, ಮಣ್ಣು ಫಲವತ್ತತೆಯ ನಿರ್ವಹಣೆ ಮತ್ತು ಸಾವಯವ ಕೃಷಿ' ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಣ್ಣು ಫಲವತ್ತತೆಯಿಂದ ಕೂಡಿರಬೇಕಾದರೆ ಅದು ಆರೋಗ್ಯವಾಗಿರಬೇಕು. ಅದಕ್ಕಾಗಿ ಮಣ್ಣಿನ ಆರೈಕೆ ಮಾಡಬೇಕು. ರೈತರು ನೈಸರ್ಗಿಕ ಕೃಷಿಯತ್ತ ಹೋಗಬೇಕು. ಪ್ರತಿವರ್ಷ ಒಂದೇ ಬೆಳೆಗೆ ಅಂಟಿಕೊಳ್ಳದೆ, ವರ್ಷ ವರ್ಷ ಬದಲಾವಣೆ ಮಾಡಬೇಕು. ಇದರಿಂದ ಮಣ್ಣಿನ ಪೋಷಕಾಂಶ ಹೆಚ್ಚುತ್ತದೆ’ ಎಂದರು.
ನೆಲಮಂಗಲ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ವಿನೋದಮ್ಮ ಮಾತನಾಡಿ, ‘ಮನುಷ್ಯನ ದುರಾಸೆಯಿಂದ ಮಣ್ಣು ನಾನಾ ರೀತಿಯಲ್ಲಿ ಮಲೀನವಾಗುತ್ತಿದೆ. ಮಣ್ಣಿಗೆ ವಿಷದ ರೂಪದಲ್ಲಿ ರಾಸಾಯನಿಕ ಸೇರಿಸಿ ಉಪಯೋಗಿಸಲು ಯೋಗ್ಯವಲ್ಲದ ಮಣ್ಣಾಗಿ ಮಾಡಿದ್ದೇವೆ. ಇನ್ನಾದರೂ ಮಣ್ಣನ್ನು ಸಾಧ್ಯವಾದಷ್ಟು ರಕ್ಷಿಸೋಣ’ ಎಂದರು.
ಕೃಷಿ ಅಧಿಕಾರಿಗಳಾದ ಸೋಂಪುರ ಹೋಬಳಿಯ ರವಿಕುಮಾರ್, ತ್ಯಾಮಗೊಂಡ್ಲುವಿನ ಜಿ.ಅಂಜನಾ, ಕಸಬಾ ಹೋಬಳಿಯ ನವೀನಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.