ADVERTISEMENT

ಮಿತ ದರದಲ್ಲಿ ಸಾವಯವ ಗೊಬ್ಬರ...!

ಬಿಟಿಎಂ ಬಡಾವಣೆಯ ಮಡಿವಾಳ ಕೆರೆ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಮಾರಾಟ

ಕಲಾವತಿ ಬೈಚಬಾಳ
Published 15 ಜನವರಿ 2019, 19:50 IST
Last Updated 15 ಜನವರಿ 2019, 19:50 IST
ಕೆರೆ ಆವರಣದಲ್ಲಿರುವ ಒಣ ಎಲೆಗಳ ಸಾವಯವ ಗೊಬ್ಬರ ತಯಾರಿ ಘಟಕ
ಕೆರೆ ಆವರಣದಲ್ಲಿರುವ ಒಣ ಎಲೆಗಳ ಸಾವಯವ ಗೊಬ್ಬರ ತಯಾರಿ ಘಟಕ   

ಬೆಂಗಳೂರು:ಮನೆಯಂಗಳದಲ್ಲಿ ಬೆಳೆಸುವ ಹೂಗಿಡಗಳಿಗೆ, ಕೈತೋಟಕ್ಕೆ ಸಾವಯವ ಗೊಬ್ಬರ ಬೇಕೇ? ಅರಣ್ಯ ಇಲಾಖೆ ಬಿಟಿಎಂ ಬಡಾವಣೆಯ ಮಡಿವಾಳ ಕೆರೆ ಆವರಣದಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡುತ್ತಿದೆ.

‘ಕೆರೆ ಆವರಣದಲ್ಲಿ ಗೊಬ್ಬರ ತಯಾರಿಕೆಘಟಕವಿದೆ. ವರ್ಷದ ಹಿಂದೆ ಬಾಷ್‌ ಕಂಪನಿ ಸಿಎಸ್‌ಆರ್‌ (ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನದಡಿ ಗೊಬ್ಬರ ತಯಾರಿಸುವ ಯಂತ್ರವನ್ನು ಒದಗಿಸಿದೆ. 5 ಕೆ.ಜಿ ಸಾವಯವ ಗೊಬ್ಬರಕ್ಕೆ ₹50 ನಿಗದಿಪಡಿಸಲಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಹರ್ಷವರ್ಧನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿಂಗಳಿಗೆ ಸುಮಾರು 30 ಕೆ.ಜಿ ರಿಂದ 35 ಕೆ.ಜಿ ಒಣಗಿದ ಎಲೆಗಳ ಕಸ ಸಂಗ್ರಹವಾಗುತ್ತದೆ. ಇದರಿಂದ ತಯಾರಿಸಿದ ಗೊಬ್ಬರವನ್ನು ಉದ್ಯಾನಕ್ಕೆ, ನರ್ಸರಿಗೆ ಬಳಸುತ್ತೇವೆ. ಉಳಿದದ್ದನ್ನು ಮಾರಾಟ ಮಾಡಲಾಗುತ್ತದೆ.
ಈ ತನಕ ಕೇವಲ 200 ಕೆ.ಜಿ ಗೊಬ್ಬರ ಮಾತ್ರ ಮಾರಾಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವವರೇ ಇಲ್ಲದಂತಾಗಿದೆ’ ಎನ್ನುತ್ತಾರೆ ಮಡಿವಾಳ ಕೆರೆಯ ದಕ್ಷಿಣ ವಲಯ ಅರಣ್ಯ ಸಂರಕ್ಷಣಾಧಿಕಾರಿ.

ADVERTISEMENT

ಗೊಬ್ಬರ ತಯಾರಿ ಹೇಗೆ : ಒಣಗಿದ ಎಲೆಗಳಕಸವನ್ನು ಒಂದೆಡೆ ರಾಶಿ ಹಾಕಿ, ನೀರು ಸಿಂಪಡಿಸುತ್ತಾರೆ. ಆಗಾಗ ಅದನ್ನು ತಿರುವಿ ಹಾಕಿ, ಮತ್ತೆ ನೀರು ಸಿಂಪಡಣೆ ಮಾಡುತ್ತಾರೆ. ಮೂರು ಬಗೆಯ ಬ್ಯಾಕ್ಟೀರಿಯಾ ಮಿಶ್ರಿತ ಪುಡಿಯನ್ನು ನೀರಿನಲ್ಲಿ ಕಲಿಸಿ,ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಅದಕ್ಕೆ ಸಿಂಪಡನೆ ಮಾಡುತ್ತಾರೆ. ಹೀಗೆ ಒಂದು ತಿಂಗಳ ಕಾಲ ಅದನ್ನು ಕೊಳೆಯಿಸಿದ ನಂತರ ಯಂತ್ರಕ್ಕೆ ಹಾಕಿದಾಗ ಹರಳು ರೂಪದ ಗೊಬ್ಬರ
ಸಿದ್ಧವಾಗುತ್ತದೆ.

ಕೆರೆ ಜಾಗದಲ್ಲಿ ಗೊಬ್ಬರ ಮಾರಾಟಕ್ಕೆ ಚಿಂತನೆ:‘ಸಾವಯವ ಗೊಬ್ಬರ ಖರೀದಿ ಪ್ರೋತ್ಸಾಹಿಸಲು ಅಗರ, ಹೆಬ್ಬಾಳ, ನಾಗವಾರ ಪ್ರದೇಶದಲ್ಲಿರುವ ಕೆರೆಗಳು ಸೇರಿದಂತೆಎಲ್ಲ ಕೆರೆಗಳ ಆವರಣದಲ್ಲೂ ಸಾವಯವ ಗೊಬ್ಬರ ಮಾರಾಟ ಮಾಡುವ ಚಿಂತನೆ ಇದೆ’ಎಂದು ಹರ್ಷವರ್ಧನ್‌ ತಿಳಿಸಿದರು.

‘ಮಡಿವಾಳ ಕೆರೆ ಆವರಣದಲ್ಲಿ ಗೊಬ್ಬರ ಸಿಗುವ ಬಗ್ಗೆ ಮಾಹಿತಿ ಫಲಕ ಅಳವಡಿಸಲಾಗಿದೆ. 5 ಕೆ.ಜಿಯಿಂದ 10 ಕೆ.ಜಿ ಗೊಬ್ಬರದ ಚೀಲಗಳನ್ನು ಕೆರೆ ಪ್ರವೇಶಕ್ಕೆ ಟಿಕೆಟ್‌ ವಿತರಿಸುವ ಕೇಂದ್ರದಲ್ಲಿ ಇರಿಸಲಾಗಿದೆ’ ಎಂದೂ ಹೇಳಿದರು.

‘ಮನೆ ಆವರಣದ ಪುಟ್ಟ ಉದ್ಯಾನ, ಕೈತೋಟಕ್ಕೆ ಇಲ್ಲಿಂದಲೇ ಸಾವಯವ ಗೊಬ್ಬರ ಖರೀದಿಸಿಕೊಂಡು ಹೋಗುತ್ತೇನೆ. ಗಿಡಗಳು ಆರೋಗ್ಯವಾಗಿ ಬೆಳೆಯುತ್ತಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ
ಗಿರಿಜಾ.

ಅಂಕಿಅಂಶ

1,148 – ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ಯಾನಗಳು

96 – ಅಭಿವೃದ್ಧಿ ಹೊಂದಿರುವಉದ್ಯಾನಗಳು

700 – ಉದ್ಯಾನಗಳಲ್ಲಿ ಸಾವಯವ ಗೊಬ್ಬರ ತಯಾರಿ ನಡೆಯುತ್ತಿದೆ

ಹೊರವಲಯಗಳಲ್ಲಿ ಗೊಬ್ಬರ ತಯಾರಿ?

‘ನಗರದ ಬಹುತೇಕ ಉದ್ಯಾನಗಳಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಗೊಬ್ಬರ ತಯಾರಿಸಲು ನಗರದ ಹೊರವಲಯಗಳಲ್ಲಿ ಜಾಗ ಗುರುತಿಸುತ್ತಿದ್ದೇವೆ’ ಎಂದು ಬಿಬಿಎಂಪಿಯ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಗಂಗಾಧರನಾಥ್‌ ಹೇಳಿದರು.

‘ಈ ಕುರಿತು ಮೇಯರ್‌ ಗಂಗಾಂಬಿಕೆ ಅವರಿಗೆ ಈಗಾಗಲೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ವರ್ಷದಿಂದ ಒಣಗಿದ ಎಲೆಗಳಿಂದ ಎರೆಹುಳು ಗೊಬ್ಬರ ತಯಾರಿಸುವ ಉದ್ದೇಶವೂ ಇದೆ’ ಎಂದರು.

‘ದರ ಪರಿಷ್ಕರಣೆ ಮಾಡಿ, ಸಾರ್ವಜನಿಕರಿಗೆ ಖರೀದಿಸಲು ಅವಕಾಶ ನೀಡುವ ಯೋಜನೆಯೂ ಇದೆ. ಪ್ರತಿ ವಲಯಗಳಲ್ಲೂ ಖರೀದಿ ಕೇಂದ್ರ ತೆರೆಯುವ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ನಿರ್ಧರಿಸಲಾಗುವುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.