ADVERTISEMENT

ಬಾಕಿ ಬಿಲ್‌: ಬಿಬಿಎಂಪಿಗೆ ₹750 ಕೋಟಿ ಬಿಡುಗಡೆ ಮಾಡಿದ ನಗರಾಭಿವೃದ್ಧಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 16:14 IST
Last Updated 27 ಜನವರಿ 2025, 16:14 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ರಾಜ್ಯ ಸರ್ಕಾರ ‘ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ’ ಯೋಜನೆಯಡಿ 2024–25ನೇ ಸಾಲಿನ ಮೂರನೇ ಕಂತಿನ ₹750 ಕೋಟಿ ಅನುದಾನವನ್ನು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಜನವರಿ 27ರಂದು ಬಿಡುಗಡೆ ಮಾಡಿದೆ.

2024–25ನೇ ಸಾಲಿನಲ್ಲಿ ನಿಗದಿಪಡಿಸಲಾಗಿರುವ ₹3 ಸಾವಿರ ಕೋಟಿ ಅನುದಾನದಲ್ಲಿ, ಎರಡು ತ್ರೈಮಾಸಿಕದಲ್ಲಿ ತಲಾ ₹750 ಕೋಟಿ ಬಿಡುಗಡೆ ಮಾಡಲಾಗಿತ್ತು. ಮೂರನೇ ಕಂತನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ADVERTISEMENT

ವಿಶೇಷ ಮೂಲಸೌಕರ್ಯ ಯೋಜನೆಯಡಿ ಬೃಹತ್‌ ರಸ್ತೆಗಳು, ಮೇಲ್ಸೇತುವೆ, ಕಾರಿಡಾರ್‌ ಮುಂತಾದ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳ ಬಾಬ್ತು ₹2,570 ಕೋಟಿಯಷ್ಟು ಬಿಲ್‌ ಪಾವತಿ ಬಾಕಿ ಉಳಿದಿದೆ. ಸಕಾಲದಲ್ಲಿ ಬಿಲ್‌ ಪಾವತಿಸದಿದ್ದಲ್ಲಿ ಕಾಮಗಾರಿಗಳ ಪ್ರಗತಿ ಕುಂಠಿತವಾಗುವ ಸಂಭವವಿರುತ್ತದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಹೀಗಾಗಿ, ಈ ಅನುದಾನ ಬಿಡುಗಡೆ ಮಾಡಲಾಗಿದ್ದು, ಜ್ಯೇಷ್ಠತೆ ಆಧಾರದಲ್ಲಿ ತುರ್ತಾಗಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಬೇಕು. ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಬಾಕಿ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿರುವ ಅವರು ಸರ್ಕಾರದ ಅನುದಾನದಿಂದ ನಿರ್ವಹಿಸಲಾಗಿರುವ ಕಾಮಗಾರಿಗಳ ಬಿಲ್‌ ಪಾವತಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇನ್ನುಳಿದ ಬಾಕಿಯನ್ನು ಶೀಘ್ರ ಪಾವತಿಸುವ ಭರವಸೆೆಯನ್ನೂ ನೀಡಿದ್ದಾರೆ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.