ADVERTISEMENT

ಬಾಕಿ ಬಿಲ್‌: ಗುತ್ತಿಗೆದಾರರೊಂದಿಗೆ ಸಚಿವ ಸತೀಶ್‌ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 16:22 IST
Last Updated 9 ಆಗಸ್ಟ್ 2025, 16:22 IST
ಸತೀಶ್‌ ಜಾರಕಿಹೊಳಿ
ಸತೀಶ್‌ ಜಾರಕಿಹೊಳಿ   

ಬೆಂಗಳೂರು: ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಸೇರಿದಂತೆ ವಿವಿಧ ವಿಚಾರಗಳನ್ನು ಆಲಿಸಲು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ರಾಜ್ಯ ಗುತ್ತಿದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಇಲಾಖೆಯಲ್ಲಿ ₹ 9 ಸಾವಿರ ಕೋಟಿ ಬಿಲ್‌ ಪಾವತಿ ಬಾಕಿ ಇದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಬೇಕು. 2017–20ರ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳಿಗೆ ವ್ಯಾಟ್‌, ಜಿಎಸ್‌ಟಿಯ ಶೇ 12 ವ್ಯತ್ಯಾಸದ ಶೇ 8 ಜಿಎಸ್‌ಟಿ ಹಣವನ್ನು ಕೊಡಬೇಕು ಎಂದು ಮುಖ್ಯಮಂತ್ರಿ ಆದೇಶ ನೀಡಿದ್ದರೂ ಬಿಡುಗಡೆಯಾಗಿಲ್ಲ ಎಂದು ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ಸಚಿವರ ಗಮನಕ್ಕೆ ತಂದರು.

ಪ್ರತಿ 10 ವರ್ಷಕ್ಕೊಮ್ಮೆ ಗುತ್ತಿಗೆದಾರರ ಪರವಾನಗಿಯನ್ನು ನವೀಕರಿಸಲು ಹಿಂದಿನ ಸಭೆಯಲ್ಲಿ ತೀರ್ಮಾನಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಟೆಂಡರ್‌ ನಿಯಮಗಳಲ್ಲಿ ವಿಧಿಸುತ್ತಿರುವ ಷರತ್ತು ಸಡಿಲಗೊಳಿಸಲು ಸರ್ಕಾರದ ಮಟ್ಟದಲ್ಲಿ ಹಲವು ಸಭೆ ನಡಸಿದರೂ ಪ್ರಯೋಜನವಾಗಿಲ್ಲ. ಲೈನ್‌ ಆಫ್‌ ಕ್ರೆಡಿಟ್‌ ನೀಡುವಲ್ಲಿ ವಿವಿಧ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿರುವುದರಿಂದ ಇದನ್ನು ರದ್ದು ಮಾಡಬೇಕು. ಟೆಂಡರ್‌ ಪ್ರಕ್ರಿಯೆ ಮುಗಿದ ನಂತರ ಎಫ್‌ಎಸ್‌ಡಿ ಮೊತ್ತದ ಶೇ 5ರ ಬದಲಾಗಿ ಶೇ 3 ಮೊತ್ತವನ್ನು ಪಕ್ಕದ ರಾಜ್ಯಗಳು ವಿಮೆ ಅಥವಾ ಎಸ್‌ಬಿಐ ಬಾಂಡ್ ಎಂದು ಪರಿಗಣಿಸುತ್ತಿವೆ. ಅದೇ ಮಾದರಿಯನ್ನು ಇಲ್ಲಿಯೂ ತರಬೇಕು ಎಂದು ಮನವಿ ಮಾಡಿದರು.

ADVERTISEMENT

ಒಟ್ಟು 16 ಬೇಡಿಕೆಗಳನ್ನು ಸಲ್ಲಿಸಲಾಯಿತು. ಕಾಲಮಿತಿಯಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಮ್ಲನ್‌ ಆದಿತ್ಯ ಬಿಸ್ವಾಸ್‌, ಕಾರ್ಯದರ್ಶಿ ಸಿ. ಸತ್ಯನಾರಾಯಣ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.